ಮನೆ ಸುದ್ದಿ ಜಾಲ 13 ವರ್ಷಗಳ ಸಿನಿಪಯಣದ ಸಂಭ್ರಮದಲ್ಲಿ ​’ಬುಲ್ ಬುಲ್’ ನಟಿ : ರಚಿತಾ ರಾಮ್

13 ವರ್ಷಗಳ ಸಿನಿಪಯಣದ ಸಂಭ್ರಮದಲ್ಲಿ ​’ಬುಲ್ ಬುಲ್’ ನಟಿ : ರಚಿತಾ ರಾಮ್

0

ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ದೀರ್ಘಕಾಲ ಯಶಸ್ಸು ಕಾಣೋದು ಬಹಳ ವಿರಳ. ಆದರೆ ಯಶಸ್ವಿ ನಟಿಯರ ಸಾಲಿನಲ್ಲಿ ಡಿಂಪಲ್​ ಕ್ವೀನ್ ಖ್ಯಾತಿಯ​ ರಚಿತಾ ರಾಮ್ ಭದ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಕಿರುತೆರೆ ಮೂಲಕ ನಟನೆ ಶುರುಮಾಡಿದ ಗುಳಿಕೆನ್ನೆ ಚೆಲುವೆ ಸಿನಿಪಯಣಕ್ಕೀಗ 13 ವರ್ಷಗಳ ಸಂಭ್ರಮ ಆಗಿದೆ ಎನ್ನಲಾಗುತ್ತಿದೆ. ಹೌದು, ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ರಚಿತಾ ರಾಮ್, ಚಾಲೆಂಜಿಂಗ್ ಸ್ಟಾರ್ ದರ್ಶನ್​ ಮುಖ್ಯಭೂಮಿಕೆಯ ‘ಬುಲ್ ಬುಲ್’ ಚಿತ್ರದ ಮೂಲಕ ಹಿರಿತೆರೆ ಪ್ರವೇಶಿಸಿದರು. ಎಂ.ಡಿ.ಶ್ರೀಧರ್​ ನಿರ್ದೇಶನದ ಈ ಸಿನಿಮಾ 2013ರ ಮೇ 10ರಂದು ತೆರೆಕಂಡು ಅಭೂತಪೂರ್ವ ಯಶಸ್ಸು ಕಂಡಿತು. ಚೊಚ್ಚಲ ಚಿತ್ರದಲ್ಲೇ ಭರವಸೆ ಮೂಡಿಸಿದ ರಚಿತಾ ರಾಮ್​​ ನಂತರದ ದಿನಗಳಲ್ಲಿ ಹಲವು ಯಶಸ್ವಿ ಸಿನಿಮಾಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದ್ದಾರೆ ಎನ್ನಬಹುದು.

ಹಿರಿತೆರೆಯಲ್ಲಿ ಅಭಿನಯ ಆರಂಭಿಸಿ ಒಂದು ದಶಕ ಕಳೆದರೂ ಅದೇ ಕ್ರೇಜ್, ಅದೇ ಚಾರ್ಮ್, ಅದೇ ಡಿಮ್ಯಾಂಡ್​​ ಹೊಂದಿರುವ ಕನ್ನಡ ಚಿತ್ರರಂಗದ ಖ್ಯಾತ ನಟಿ ಈ ‘ಬುಲ್ ಬುಲ್’ ಚಿತ್ರದಲ್ಲಿ ಕಾವೇರಿ ಎಂಬ ಪಾತ್ರವನ್ನು ನಿರ್ವಹಿಸಿದ್ದರು. ಈ ಸಿನಿಮಾದಲ್ಲಿನ ಅಮೋಘ ಅಭಿನಯಕ್ಕಾಗಿ ಫಿಲ್ಮ್​ಫೇರ್ ಬೆಸ್ಟ್ ಆ್ಯಕ್ಟ್ರೆಸ್ ಅವಾರ್ಡ್ ಅನ್ನೂ ಗೆದ್ದುಕೊಂಡಿದ್ದಾರೆ. ಈ ಚಿತ್ರದ ನಾಯಕ ನಟಿ ಪಾತ್ರಕ್ಕೆ 2012ರಲ್ಲಿ ನಡೆದ ಆಡಿಶನ್​ನಲ್ಲಿ 200 ಜನರು ಸರ್ಧಿಸಿದ್ದರು ಅನ್ನೋದು ಗಮನಾರ್ಹ ಸಂಗತಿ. ಕಿರುತೆರೆಯಲ್ಲಿ ಪ್ರಸಾರ ಕಂಡಿದ್ದ ಅರಸಿ ಧಾರಾವಾಹಿ ಮೂಲಕ ಜನಪ್ರಿಯರಾಗದ್ದ ಬಿಂದ್ಯಾ ರಾಮ್ ಅವರು ರಚಿತಾ ರಾಮ್ ಆಗಿ ಬದಲಾಗೋಕೆ ಕಾರಣವಾಗಿದ್ದು ಇದೇ ‘ಬುಲ್ ಬುಲ್’ ಸಿನಿಮಾ. ನವ ನಟಿ, ಖ್ಯಾತ ನಟ ದರ್ಶನ್ ಜೊತೆಗೆ ನಟಿಸುವ ಅವಕಾಶ ಪಡೆದುಕೊಂಡಿದ್ದು ಇಡೀ ಗಾಂಧಿನಗರದಾದ್ಯಂತ ಸುದ್ದಿಯಾಗಿತ್ತು. ಆದರೆ ಅದೇ ನಟಿ ಮುಂದೆ ಸ್ಯಾಂಡಲ್​ವುಡ್​ನ ಬಹುತೇಕ ಎಲ್ಲಾ ಸೂಪರ್ ಸ್ಟಾರ್ಸ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಅಂತಾ ಬಹುಶಃ ಯಾರು ಊಹಿಸಿರಕ್ಕಿಲ್ಲ. ಹಾಗೂ ಸೂಪರ್​ ಸ್ಟಾರ್ಸ್​ ಜೊತೆ ಸ್ಕ್ರೀನ್​ ಶೇರ್: ಚಾಲೆಂಜಿಂಗ್ ಸ್ಟಾರ್ ದರ್ಶನ್​ ತೂಗುದೀಪ ಜೊತೆ ನಟಿಸಿ ಚೊಚ್ಚಲ ಚಿತ್ರದಲ್ಲೇ ವಿಶ್ವಾಸ ಮೂಡಿಸಿದ ಚೆಲುವೆ ನಂತರದ ದಿನಗಳಲ್ಲಿ ಕಿಚ್ಚ ಸುದೀಪ್, ಪುನೀತ್ ರಾಜ್​ಕುಮಾರ್, ಶಿವರಾಜ್​​​ಕುಮಾರ್, ಗಣೇಶ್, ರಮೇಶ್ ಅರವಿಂದ್ ‌ಹೀಗೆ ಬಹುತೇಕ ಎಲ್ಲಾ ಖ್ಯಾತ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿರುವ ರಚ್ಚು, ಇತ್ತೀಚೆಗೆ ಒಂದು ಹೆಜ್ಜೆ ಮುಂದೆ ಹೋಗಿ ತಲೈವ ರಜನಿಕಾಂತ್ ಜೊತೆ ಕೂಲಿ ಸಿನಿಮಾದಲ್ಲಿ ವಿಶೇಷ ಪಾತ್ರ ನಿರ್ವಹಿಸಿ ತಮಿಳು ಸಿನಿಮಂದಿಯ ಮನಸ್ಸನ್ನೂ ಗೆದ್ದಿದ್ದಾರೆ ಎನ್ನಬಹುದು.

ಹಾಗೆ ಅಂಬರೀಶ, ದಿಲ್ ರಂಗೀಲಾ, ರನ್ನ, ರಥಾವರ, ಚಕ್ರವ್ಯೂಹ, ಜಗ್ಗುದಾದ, ಭರ್ಜರಿ, ಅಯೋಗ್ಯ, ಸೀತಾರಾಮ ಕಲ್ಯಾಣ, ಭರಾಟೆ, ರುಸ್ತುಂ, ಮಾನ್ಸೂನ್​ ರಾಗ, ಕ್ರಾಂತಿ, ಮ್ಯಾಟ್ನಿ, ಸಂಜು ವೆಡ್ಸ್ ಗೀತಾ 2 ಹೀಗೆ ಹಲವು ಯಶಸ್ವಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಚಿತ್ರರಂಗದಲ್ಲಿ 13 ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದು, ಮತ್ತಷ್ಟು ಮಗದಷ್ಟು ಯಶಸ್ವಿ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ಕಾಣಿಸಿಕೊಳ್ಳಲಿ. ಕನ್ನಡ ನಟಿ ಮತ್ತಷ್ಟು ಬಹುಭಾಷೆಯ ಸಿನಿಮಾಗಳಲ್ಲಿ ಮಿಂಚಲಿ ಎಂದು ಹಾರೈಸುತ್ತಿದ್ದಾರೆ. ಇತ್ತೀಚಿನ ಸಿನಿಮಾಗಳ ಬಗ್ಗೆ ಹೇಳೋದಾದ್ರೆ, ಸೂಪರ್​ ಸ್ಟಾರ್ ದುನಿಯಾ ವಿಜಯ್​ ಜೊತೆ ತೆರೆಹಂಚಿಕೊಂಡ ‘ಲ್ಯಾಂಡ್​ಲಾರ್ಡ್’ ಜನವರಿ 23ರಂದು ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡು ಉತ್ತಮ ಪ್ರದರ್ಶನ ನೀಡಿತು. ಈ ವರ್ಷ ಬಿಡುಗಡೆಯಾದ ಕನ್ನಡದ ಮೊದಲ ಸ್ಟಾರ್ ಸಿನಿಮಾವಾಗಿ ಗುರುತಿಸಿಕೊಂಡಿದ್ದ ‘ಲ್ಯಾಂಡ್​ಲಾರ್ಡ್’ ಪ್ರೇಕ್ಷಕರನ್ನು ತಲುಪುವಲ್ಲಿ ಯಶಕಂಡಿದೆ. ಮಾರ್ಚ್ 19 ರಿಂದ ಝೀ5ಕನ್ನಡ ಒಟಿಟಿ ವೇದಿಕೆಯಲ್ಲಿ ಈ ಚಿತ್ರ ಪ್ರಸಾರ ಕಾಣುತ್ತಿದೆ. ಇನ್ನೂ, ಅನಿಲ್ ಕುಮಾರ್ ನಿರ್ದೇಶನದ ಕಲ್ಟ್ ಸಿನಿಮಾ ಕೂಡಾ ಜನವರಿ 23ರಂದೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಸಚಿವ ಜಮೀರ್‌ ಪುತ್ರ ಝೈದ್ ಖಾನ್ ನಟನೆಯ ಈ ಚಿತ್ರದಲ್ಲಿ ಮಲೈಕಾ ವಸುಪಾಲ್ ಪ್ರಮುಖ ಪಾತ್ರ ವಹಿಸಿದ್ದರು. ಮುಂಬರುವ ಸಿನಿಮಾಗಳ ಬಗ್ಗೆ ಗಮನಿಸೋದಾದ್ರೆ, ಧ್ರುವ ಸರ್ಜಾ ಜೊತೆ ‘ಕ್ರಿಮಿನಲ್’, ಸತೀಶ್ ನೀನಾಸಂ ಜೊತೆ ‘ಅಯೋಗ್ಯ 2’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನಲ್ಲಿ ದೊಡ್ಡ ನಿರ್ಮಾಣ ಸಂಸ್ಥೆ ಜೊತೆಯೂ ಮಾತುಕತೆ ನಡೆದಿದೆ. ತೆಲುಗಿನ 2 ಸಿನಿಮಾಗಳು ಈ ತಿಂಗಳಲ್ಲಿ ಅನೌನ್ಸ್ ಆಗಲಿದೆ ಎಂಬ ಮಾಹಿತಿ ಇದೆ. ಅಭಿಮಾನಿಗಳು ಹೊಸ ಸಿನಿಮಾ ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.