ಹುಬ್ಬಳ್ಳಿ: ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಸರಕಾರದ ಅವಧಿಯಲ್ಲಿ ನೋಟಿಸ್ ನೀಡಿದ್ದರೂ ತಪ್ಪು. ವಿಜಯಪುರದಲ್ಲಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬುಧವಾರ (ಅ30)ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮುಗ್ಧ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಇಷ್ಟೊಂದು ವಿರೋಧ ಮಾಡುತ್ತಿದ್ದಂತೆ ನೋಟಿಸ್ ವಾಪಸ್ಸು ಪಡೆದಿದ್ದೇವೆ ಎನ್ನುತ್ತಿದ್ದಾರೆ. ಇದೀಗ ಪಹಣಿ ಹೆಸರು ನಮೂದು ಆಗಿದ್ದು, ಸರಕಾರ ಯಾವ ಕ್ರಮ ಕೈಗೊಳ್ಳಲಿದೆ. ಸ್ವತಂತ್ರ ಪೂರ್ವದಿಂದಲೇ ಕೆಲವರ ಜಮೀನಿದೆ. ಅಂತಹ ಜಮೀನುಗಳ ಇಗಾಗಲೇ ಪಹಣಿಯಲ್ಲಿ ಅವರ ಹೆಸರು ಬಂದಿದೆ. ಇದನ್ನು ಯಾವ ಕಾಲಕ್ಕೂ ಒಪ್ಪಲಿ ಸಾಧ್ಯವಿಲ್ಲ. ಮೊದಲು ವಕ್ಫ್ ನ್ಯಾಯಾಲಯ ಬಂದ್ ಮಾಡಬೇಕು ಎಂದರು.
ಇಂದು ವಿಜಯಪುರದಲ್ಲಿ ರೈತರ ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುವುದು. ಹಿಂದೆ ನಮ್ಮ ಸರಕಾರ ನೋಟಿಸ್ ನೀಡಿದ್ದರೆ ಅದೂ ತಪ್ಪು. ಅಂದು ನೋಟಿಸ್ ನೀಡಿರುವ ಬಗ್ಗೆ ನಮ್ಮ ಸರ್ಕಾರದ ಪ್ರಮುಖರ ಗಮನಕ್ಕೆ ಬಂದಿಲ್ಲ. ಅಕಸ್ಮಾತ್ ನಮ್ಮ ಗಮನಕ್ಕೆ ಬಂದಿದ್ರೆ ನಾವು ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದೆವು. ಇಲ್ಲಿರುವ ಮುಸ್ಲಿಮರು ಮೂಲತಃ ಹಿಂದೂಗಳು. ಅವರಿಗೆ ಆಮಿಷ, ಬೆದರಿಕೆಯೊಡ್ಡಿ ಮತಾಂತರ ಮಾಡಲಾಗಿದೆ. ಭಾರತದಲ್ಲಿ ಹಿಂದೂ ಧರ್ಮ ಹುಟ್ಟಿದಾಗ ಇಸ್ಲಾಂ ಇರಲೇ ಇಲ್ಲ ಎಂದು ಸಚಿವ ಜಮೀರ್ ಅಹ್ಮದ್ ಅವರ ವಕ್ಫ್ ಹಾಗೂ ಮುಜರಾಯಿ ಇಲಾಖೆ ಒಂದೇ ಎಂದಿದ್ದಕ್ಕೆ ಸಚಿವ ಜೋಶಿ ಅವರು ತಿರುಗೇಟು ನೀಡಿದರು.