ಬೆಂಗಳೂರು : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ವಿಚಾರವಾಗಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಕೆ ಮಾಡಿದೆ. ಅರ್ಜಿಯಲ್ಲಿ ಪ್ರಮುಖ ವಿಚಾರಗಳನ್ನು ಉಲ್ಲೇಖಿಸಿ ಮರು ಪರಿಶೀಲನೆ ಮಾಡಲು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮನವಿ ಮಾಡಿದೆ.
ಈ ಮೊದಲು ಸರ್ಕಾರ ತೃತೀಯ ಭಾಷೆ ಹಿಂದಿಗೆ ಅಂಕ ನೀಡುವ ಬದಲು ಗ್ರೇಡ್ ನೀಡಲು ಮುಂದಾಗಿತ್ತು. ಇದಕ್ಕೆ ಹೈಕೋರ್ಟ್ ಗ್ರೇಡ್ ಬದಲಿಗೆ ಅಂಕಗಳನ್ನು ನೀಡಿ ಎಂದು ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದೀಗ ರಾಜ್ಯ ಸರ್ಕಾರ ಮರುಪರಿಶೀಲನೆ ಮಾಡುವಂತೆ ಹೈಕೋರ್ಟ್ಗೆ ಮನವಿ ಮಾಡಿದೆ. ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ಎಲ್ಲಾ ತೃತೀಯ ಭಾಷೆ, ಎನ್‌ಎಸ್‌ಕ್ಯೂಎಫ್ ವಿಷಯಗಳಿಗೆ ಅರ್ಜಿ ವಿಚಾರಣೆ ತುರ್ತಾಗಿ ನಡೆಸುವಂತೆ ಸರ್ಕಾರ ಮನವಿ ಸಲ್ಲಿಸಿದೆ.
ಗ್ರೇಡ್ ನೀಡಿರುವ ಶಿಕ್ಷಣ ಇಲಾಖೆಯ ಉದ್ದೇಶವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ನಡುವೆ ಸಮಾನ ಅವಕಾಶ ಕಲ್ಪಿಸಲು, ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಲು ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್ ವಿಷಯಗಳಿಗೆ, ಅಂಕಗಳ ಬದಲಾಗಿ ಗ್ರೇಡ್ ನೀಡಲು ಉದ್ದೇಶಿಸಲಾಗಿದೆ. ಅಂಕದ ಬದಲು ಗ್ರೇಡ್ ನೀಡುವುದು ಸುಧಾರಣಾ ಕ್ರಮ, ಇದರಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ ಆಗುತ್ತದೆ. ಸರ್ಕಾರದ ನಡೆಯಿಂದ ತೃತೀಯ ಭಾಷೆ ತಿರಸ್ಕಾರಕ್ಕೆ ಒಳಗಾಗುತ್ತದೆ ಎಂಬ ವಾದದಲ್ಲಿ ಹುರುಳಿಲ್ಲ, ಅರ್ಜಿಯನ್ನು ಮರು ಪರಿಶೀಲನೆ ಮಾಡಬೇಕು ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದೆ.
ಇದರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಟೆನ್ಶನ್ ಶುರುವಾಗಿದೆ. ತೃತೀಯ ಭಾಷೆ ಹಿಂದಿ ವಿಚಾರಕ್ಕೆ ಎದ್ದಿರುವ ಗೊಂದಲದಿಂದ ಫಲಿತಾಂಶ ಪ್ರಕಟ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಲಾಖೆ ಎಡವಟ್ಟಿನಿಂದ ಉತ್ತಮ ಸ್ಕೋರ್ ಬರಬಹುದು ಎಂದುಕೊಂಡಿರುವ ಮಕ್ಕಳಿಗೂ ಟೆನ್ಶನ್ ಶುರುವಾಗಿದೆ. ಸರ್ಕಾರದ ನಡೆಯಿಂದ ಗೊಂದಲ ಸೃಷ್ಟಿಯಾಗಿದ್ದು, ವಿದ್ಯಾರ್ಥಿಗಳಿಗೆ ಅನ್ಯಾಯ ಆಗುವ ಸಂಭವ ಇದೆ ಎಂದು ಪೋಷಕರ ಸಂಘಟನೆ ಆತಂಕ ವ್ಯಕ್ತಪಡಿಸಿದೆ.














