ಮನೆ ಕಾನೂನು ವಿದ್ಯುತ್ ಸ್ಪರ್ಶದಿಂದ ವನ್ಯಜೀವಿ, ಜನ ಸಾಮಾನ್ಯರ ಮರಣ ತಪ್ಪಿಸಲು ಮಾರ್ಗಸೂಚಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ವಿದ್ಯುತ್ ಸ್ಪರ್ಶದಿಂದ ವನ್ಯಜೀವಿ, ಜನ ಸಾಮಾನ್ಯರ ಮರಣ ತಪ್ಪಿಸಲು ಮಾರ್ಗಸೂಚಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

0

ರಾಜ್ಯದಲ್ಲಿ ವಿದ್ಯುತ್ ಸ್ಪರ್ಶದಿಂದ ವನ್ಯಜೀವಿಗಳು ಹಾಗೂ ಜನ ಸಾಮಾನ್ಯರು ಸಾವನ್ನಪ್ಪುವುದನ್ನು ತಪ್ಪಿಸಲು ಸೂಕ್ತ ಮಾರ್ಗಸೂಚಿ ರೂಪಿಸಿ ಜಾರಿಗೊಳಿಸುವುದಕ್ಕೆ ಉನ್ನತ ಮಟ್ಟದ ಸಮಿತಿ ರಚಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.

ಬೆಂಗಳೂರಿನ ವಕೀಲ ಅಂಕುಶ್ ಎಣ್ಣೆಮಜಲು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಕೆಲ ಕಾಲ ಅರ್ಜಿ ವಿಚಾರಣೆ ನಡೆಸಿದ ನಂತರ ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪೀಠವು ನೋಟಿಸ್  ಜಾರಿಗೊಳಿಸಿದೆ.

ಶಿವಮೊಗ್ಗದ ಆಯನೂರು ತಾಲ್ಲೂಕಿನ ಚೆನ್ನಹಳ್ಳಿಯಲ್ಲಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ಮೆಕ್ಕಜೋಳ ಬೆಳೆದಿದ್ದರು. ಜಮೀನಿನ ಸುತ್ತ ತಂತಿ ಅಳವಡಿಸಿ, ಅದಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ನೀಡಿದ್ದರು. ಭದ್ರಾ ಸಂರಕ್ಷಿತ ಅರಣ್ಯ ಪ್ರದೇಶದಿಂದ ಏಳು ಆನೆಗಳು ಆಹಾರ ಅರಸಿ ಬಂದಿದ್ದವು. ಅದರಲ್ಲಿ ಎರಡು ಗಂಡು ಆನೆಗಳು ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದವು. ಈ ಕುರಿತ ವರದಿ 2022ರ ಸೆಪ್ಟೆಂಬರ್ 26ರಂದು ಮಾಧ್ಯಮದಲ್ಲಿ ಪ್ರಕಟಗೊಂಡಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಮಾದರಿಯ ಪ್ರಕರಣಗಳು ರಾಜ್ಯದಲ್ಲಿ ಪದೇ ಪದೇ ಸಂಭವಿಸುತ್ತಿವೆ. ಕರ್ನಾಟಕದಲ್ಲಿ ಅದರಲ್ಲೂ ಚಾಮರಾಜನಗರದಲ್ಲಿ 36 ಆನೆಗಳು ಈ ರೀತಿ ಸಾವನ್ನಪ್ಪಿವೆ. ಮೈಸೂರಿನಲ್ಲಿ 12, ಕೊಡಗಿನಲ್ಲಿ 10, ಬೆಂಗಳೂರಿನಲ್ಲಿ 7, ಹಾಸನದಲ್ಲಿ 4 ಮತ್ತು ಚಿಕ್ಕಮಗಳೂರಿನಲ್ಲಿ 1 ಆನೆ ಈ ರೀತಿಯ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿವೆ. ಕರ್ನಾಟದಕ ಹಲವು ಭಾಗಗಳು ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ಜಮೀನಿಗೆ ತಂತಿ ಅಳವಡಿಸಿ, ಅದಕ್ಕೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಆದರೆ, ಈ ವಿಷಯದ ಬಗ್ಗೆ ಅರಣ್ಯ ಮತ್ತು ಇಂಧನ ಇಲಾಖೆ ವಿಚಕ್ಷಣಾ ವಿಭಾಗದ ಅಧಿಕಾರಿಗಳು ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ ಅನಧಿಕೃತವಾಗಿ ಅಳವಡಿಸಿದ ವಿದ್ಯುತ್ ತಂತಿಗಳಿಂದ ವಿದ್ಯುತ್ ಪ್ರವಹಿಸಿ ಮೃತಪಡುವುದರಿಂದ ವನ್ಯಜೀವಿ ಮತ್ತು ಮನುಷ್ಯರನ್ನು ರಕ್ಷಿಸಲು ಸೂಕ್ತ ಮಾರ್ಗಸೂಚಿ ರೂಪಿಸಿ ಜಾರಿಗೊಳಿಸಬೇಕಿದೆ. ಮಾರ್ಗಸೂಚಿಗಳನ್ನು ಜಾರಿಗೊಳಿಸಲು ವಿಶೇಷ ದಳ ರೂಪಿಸಬೇಕಿದೆ. ಆದ್ದರಿಂದ ಮಾರ್ಗಸೂಚಿ ರೂಪಿಸುವುದಕ್ಕೆ ಉನ್ನತ ಮಟ್ಟದ ಸಮಿತಿ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಅಲ್ಲದೆ, ವಿದ್ಯುತ್ ಪ್ರವಹಿಸಿ ಕಳೆದ ವರ್ಷಗಳಿಂದ ಹುಲಿ, ಆನೆ ಸೇರಿದಂತೆ ಎಷ್ಟು ವನ್ಯಜೀವಿಗಳು ಮತ್ತು ಮಾನವರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು. ಇಂತಹ ಪ್ರಕರಣಗಳಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಪರ ವಕೀಲ ಧರ್ಮಪಾಲ್ ವಾದ ಮಂಡಿಸಿದರು.

ಹಿಂದಿನ ಲೇಖನಉಡುಪಿ: ಆರು ಅಂಗಡಿಗಳ ಬೀಗ ಮುರಿದು ನಗದು ದೋಚಿದ ಕಳ್ಳರು
ಮುಂದಿನ ಲೇಖನಪೊಲೀಸ್ ನೇಮಕಾತಿ: ವಯೋಮಿತಿ ಹೆಚ್ಚಿಸುವ ಕುರಿತು ಚಿಂತನೆ ನಡೆದಿದೆ- ಆರಗ ಜ್ಞಾನೇಂದ್ರ