ಮನೆ ಕಾನೂನು ಪ್ರಧಾನಿ ಮೋದಿ ಪದವಿ ಪ್ರಮಾಣ ಪತ್ರ ಒದಗಿಸಲು ಸೂಚಿಸಿದ್ದ ಸಿಐಸಿ ಆದೇಶ ವಜಾಗೊಳಿಸಿದ ಗುಜರಾತ್ ಹೈಕೋರ್ಟ್:...

ಪ್ರಧಾನಿ ಮೋದಿ ಪದವಿ ಪ್ರಮಾಣ ಪತ್ರ ಒದಗಿಸಲು ಸೂಚಿಸಿದ್ದ ಸಿಐಸಿ ಆದೇಶ ವಜಾಗೊಳಿಸಿದ ಗುಜರಾತ್ ಹೈಕೋರ್ಟ್: ಕೇಜ್ರಿವಾಲ್’ಗೆ ದಂಡ

0

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಮಾಹಿತಿ ಹಕ್ಕು ಕಾಯಿದೆ ಅಡಿ ಒದಗಿಸುವ ಅಗತ್ಯವಿಲ್ಲ ಎಂದು ಶುಕ್ರವಾರ ಗುಜರಾತ್ ಹೈಕೋರ್ಟ್ ಆದೇಶಿಸಿದೆ.

ಮೋದಿ ಪದವಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಪ್ರಧಾನಿ ಕಾರ್ಯಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ) ಮತ್ತು ಗುಜರಾತ್ ಹಾಗೂ ದೆಹಲಿ ವಿಶ್ವವಿದ್ಯಾಲಯಗಳಿಗೆ ಆದೇಶಿಸಿದ್ದ ಮುಖ್ಯ ಮಾಹಿತಿ ಆಯೋಗದ ಆದೇಶವನ್ನು ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರ ನೇತೃತ್ವದ ಏಕಸದಸ್ಯ ಪೀಠವು ಬದಿಗೆ ಸರಿಸಿದೆ.

ಅಲ್ಲದೆ, ಪ್ರಧಾನಿ ಮೋದಿಯವರ ಪದವಿ ಪ್ರಮಾಣ ಪತ್ರ ಮಾಹಿತಿ ಕೋರಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್’ಗೆ ನ್ಯಾಯಾಲಯವು ₹25,000 ದಂಡ ಹಾಕಿದೆ. ಸಿಐಸಿ ಆದೇಶ ಪ್ರಶ್ನಿಸಿ ಗುಜರಾತ್ ವಿಶ್ವವಿದ್ಯಾಲಯ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ಮಾಡಿದೆ. ಮೋದಿಯವರು ತಾವು 1978ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದು, 1983ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.

ಕಳೆದ ತಿಂಗಳು ನಡೆದ ವಿಚಾರಣೆಯಲ್ಲಿ ಗುಜರಾತ್ ವಿಶ್ವವಿದ್ಯಾಲಯ ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಇಲ್ಲಿ ಮುಚ್ಚಿಡುವಂಥದ್ದೇನು ಇಲ್ಲ. ಆದರೆ, ವಿಶ್ವವಿದ್ಯಾಲಯವನ್ನು ಮಾಹಿತಿ ನೀಡುವಂತೆ ಒತ್ತಾಯಿಸಲಾಗದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಹಿಡಿದಿರುವ ವ್ಯಕ್ತಿ ಡಾಕ್ಟರೇಟ್ ಪಡೆದಿರಲಿ ಅಥವಾ ಅನಕ್ಷರಸ್ಥನಾಗಿರಲಿ ಅದರಿಂದ ಯಾವುದೇ ವ್ಯತ್ಯಾಸವಾಗದು. ಈ ಪ್ರಕರಣದಲ್ಲಿ ಯಾವುದೇ ತೆರನಾದ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ಅಲ್ಲದೆ, ಪ್ರಧಾನಿಯವರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ” ಎಂದಿದ್ದರು.

ಅಲ್ಲದೇ, “ಯಾರದೋ ಹುಡುಗಾಟಿಕೆಗೆ ಅಥವಾ ಬೇಜವಾಬ್ದಾರಿಯುತ ಕುತೂಹಲ ತಣಿಸುವುದಕ್ಕೆ ನಮ್ಮನ್ನು ಮಾಹಿತಿ ನೀಡುವಂತೆ ಸೂಚಿಸಲಾಗದು. ಕೇಳಲಾಗಿರುವ ಮಾಹಿತಿಗೂ ಮೋದಿಯವರ ಸಾರ್ವಜನಿಕ ವ್ಯಕ್ತಿತ್ವಕ್ಕೂ ಯಾವುದೇ ಸಂಬಂಧವಿಲ್ಲ. ಒಂದೊಮ್ಮೆ ರಾಷ್ಟ್ರಪತಿಯವರ ಎತ್ತರವೆಷ್ಟು, ಅವರ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಇತ್ಯಾದಿ ಮಾಹಿತಿಯನ್ನು ಆರ್ಟಿಐ ಅಡಿ ಕೇಳಿದರೆ ಅದಕ್ಕೆ ತರ್ಕವಿದೆಯೇ? ಅದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆಯೇ? ನಾನು ಏನು ತಿಂಡಿ ತಿಂದೆ ಎಂದು (ಆರ್’ಟಿಐ ಅಡಿ) ಕೇಳಲಾಗದು. ಆದರೆ, ತಿಂಡಿ ತಿನ್ನಲು ಎಷ್ಟು ಹಣ ವ್ಯಯಿಸಿದ್ದೇನೆ ಎಂಬುದನ್ನು ಕೇಳಬಹುದಾಗಿದೆ” ಎಂದು ವಾದಿಸಿದ್ದರು.

ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪೆರ್ಸಿ ಕವಿನಾ ಅವರು “ಮೋದಿ ಅವರು ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿರುವ ಉಮೇದುವಾರಿಕೆಯಲ್ಲಿ ಶೈಕ್ಷಣಿಕ ಅರ್ಹತೆ ಉಲ್ಲೇಖಿಸಲಾಗಿದೆ. ಹೀಗಾಗಿ, ನಾವು ಪದವಿ ಪ್ರಮಾಣ ಪತ್ರದ ಪ್ರತಿಗಳನ್ನು ಕೇಳುತ್ತಿದ್ದೇವೆಯೇ ವಿನಾ ಅಂಕಪಟ್ಟಿಯನ್ನಲ್ಲ. ರಾಜೀವ್ ಶುಕ್ಲಾ ಎಂಬವರ ಜೊತೆ ಮೋದಿಯವರು ನೀಡಿರುವ ಸಂದರ್ಶನವು ಅಂತರ್ಜಾಲದಲ್ಲಿದೆಯೇ ವಿನಾ ಎಸ್’ಜಿಯವರು ಮಾಹಿತಿ ನೀಡಿರುವಂತೆ ಪದವಿ ಪ್ರಮಾಣ ಪತ್ರವು ಅಂತರ್ಜಾಲದಲ್ಲಿ ಇಲ್ಲ. ಇದಕ್ಕಾಗಿ ನಾವು ಪದವಿ ಪ್ರಮಾಣ ಪತ್ರದ ಪ್ರತಿ ಕೇಳಿದ್ದೇವೆ” ಎಂದು ವಾದಿಸಿದ್ದರು.

ಹಿಂದಿನ ಲೇಖನದಲಿತ ಸಮುದಾಯದ ಪ್ರಭಾವಿ ನಾಯಕರನ್ನು ಸಿದ್ದರಾಮಯ್ಯ ವ್ಯವಸ್ಥಿತವಾಗಿ ತುಳಿದರು: ಛಲವಾದಿ ನಾರಾಯಣಸ್ವಾಮಿ
ಮುಂದಿನ ಲೇಖನಕೊರೊನಾ ಪ್ರಕರಣಗಳ ಏರಿಕೆ: ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ ತಮಿಳುನಾಡು ಸರ್ಕಾರ