ಬೆಂಗಳೂರು ವಕೀಲರ ಸಂಘಕ್ಕೆ ಫೆಬ್ರವರಿ 16ರಂದು ಚುನಾವಣೆ ನಿಗದಿಯಾಗಿದ್ದು, ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಮತದಾನಕ್ಕೆ ಎಲ್ಲಾ ವ್ಯವಸ್ಥೆಯಾಗಿರುವುದರಿಂದ ಈ ಹಂತದಲ್ಲಿ ಹೈಕೋರ್ಟ್ ಘಟಕದಲ್ಲಿ ಪ್ರತ್ಯೇಕ ಮತಗಟ್ಟೆ ವ್ಯವಸ್ಥೆ ಮಾಡಲು ಮುಖ್ಯ ಚುನಾವಣಾಧಿಕಾರಿ/ಉನ್ನತಾಧಿಕಾರ ಸಮಿತಿಗೆ (ಎಚ್‌ಪಿಸಿ) ನಿರ್ದೇಶಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಹೈಕೋರ್ಟ್ ಘಟಕದ ಆಡಳಿತ ಮಂಡಳಿ ಸದಸ್ಯರಾದ ಎಂ ಚಾಮರಾಜ, ಎಸ್ ರಾಜು, ಬಿ ಬಾಲಕೃಷ್ಣ ಮತ್ತು ಕೆ ಚಂದ್ರಕಾಂತ್ ಪಾಟೀಲ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ನಡೆಸಿತು.
ಮುಂದಿನ ಚುನಾವಣೆಯಲ್ಲಿ ಉನ್ನತಾಧಿಕಾರ ಸಮಿತಿಯು ಹೈಕೋರ್ಟ್ ಘಟಕದಲ್ಲಿ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಬೇಕು ಎಂದು ನ್ಯಾಯಾಲಯವು ಎಚ್‌ಪಿಸಿಗೆ ಕೋರುತ್ತದೆ. ಮುಂದಿನ ಚುನಾವಣೆ ವೇಳೆಗೆ ಎಎಬಿಯು ಹೈಕೋರ್ಟ್ ಘಟಕದಲ್ಲಿ ಹೆಚ್ಚುವರಿ ಮತಗಟ್ಟೆ ಸ್ಥಾಪಿಸುವುದನ್ನು ಖಾತರಿಪಡಿಸಬೇಕು. ಇದರಿಂದ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲು ಸಕ್ಷಮ ಪ್ರಾಧಿಕಾರಕ್ಕೆ ಅಗತ್ಯವಾದ ಸಮಯ ಇರಲಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
16.02.2025ಕ್ಕೆ ಚುನಾವಣೆ ನಿಗದಿಯಾಗಿರುವುದರಿಂದ ಎಲ್ಲಾ ಸಿದ್ಧತೆಗಳು ಮುಗಿದಿವೆ. ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಹೈಕೋರ್ಟ್ ಘಟಕದಲ್ಲಿ ಪ್ರತ್ಯೇಕ ಮತಗಟ್ಟೆ ಸ್ಥಾಪಿಸಲು ಉನ್ನತಾಧಿಕಾರ ಸಮಿತಿಗೆ ನಿರ್ದೇಶಿಸುವುದು ಕಾರ್ಯಸಾಧುವಲ್ಲ. ಹೀಗೆ ಮಾಡುವುದು ಚುನಾವಣೆಯಲ್ಲಿ ಮಧ್ಯಪ್ರವೇಶಿಸಿದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ವಕೀಲರು ಮತಗಟ್ಟೆಗೆ ತೆರಳಿ ನಿರುಮ್ಮಳವಾಗಿ ಮತದಾನ ಮಾಡಿ ಬರಲು ಅನುವಾಗುವ ನಿಟ್ಟಿನಲ್ಲಿ ಮತದಾನದ ದಿನದಂದು ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಸಿಟಿ ಸಿವಿಲ್ ಕೋರ್ಟ್ ಮುಂದೆ ಕರಪತ್ರ, ಭಿತ್ತಿಪತ್ರಗಳನ್ನು ಹಿಡಿದು ಪ್ರಚಾರ ಕೈಗೊಳ್ಳಬಾರದು. ಎಎಬಿ ಸದಸ್ಯರಲ್ಲದವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗದಂತೆ ಅಭ್ಯರ್ಥಿಗಳು ಖಾತರಿಪಡಿಸಬೇಕು.
ಉನ್ನತಾಧಿಕಾರ ಸಮಿತಿ ಜಾರಿಗೊಳಿಸಿರುವ ನೀತಿ ಸಂಹಿತೆ ಹಾಗೂ ಅಭ್ಯರ್ಥಿಗಳು ಅಫಿಡವಿಟ್ ಮೂಲಕ ನೀಡಿರುವ ಮುಚ್ಚಳಿಕೆಯ ಅನುಸಾರ ನಡೆದುಕೊಳ್ಳಬೇಕು. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ ಅಭ್ಯರ್ಥಿಯನ್ನು ಅನರ್ಹಗೊಳಿಸಲಾಗುತ್ತದೆ.
ಬೆಂಗಳೂರು ವಕೀಲರ ಸಂಘದ ಸದಸ್ಯರಿಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ನೆರವಾಗುವ ನಿಟ್ಟಿನಲ್ಲಿ ಅವರ ವಾಹನಗಳನ್ನು ವಿಶ್ವವಿದ್ಯಾಲಯದ ಜಾಗದಲ್ಲಿ ಪಾರ್ಕ್ ಮಾಡಲು ಅವಕಾಶ ಮಾಡಿಕೊಡುವಂತೆ ಬೆಂಗಳೂರು ಸಿಟಿ ವಿಶ್ವವಿದ್ಯಾಲಯಕ್ಕೆ ನ್ಯಾಯಾಲಯವು ಮನವಿ ಮಾಡುತ್ತದೆ. ಚುನಾವಣೆಯ ಬಳಿಕ ಸ್ವಚ್ಛತೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಇದೇ ಕ್ರಮವನ್ನು ಸರ್ಕಾರಿ ಕಲಾ ಕಾಲೇಜಿನಲ್ಲಿ ಮಾಡಲಾಗುತ್ತದೆ.
ಎಎಬಿ ನೀಡಿರುವ ಸ್ಮಾರ್ಟ್‌ಕಾರ್ಡ್ ಹೊಂದಿರುವ ವಕೀಲರಿಗೆ ಮಾತ್ರ ನಿಗದಿತ ಸ್ಥಳದಲ್ಲಿ ಪಾರ್ಕ್ ಮಾಡಲು ಅವಕಾಶ ಕಲ್ಪಿಸುವುದನ್ನು ಮುಖ್ಯ ಚುನಾವಣಾಧಿಕಾರಿ ಖಾತರಿಪಡಿಸಬೇಕು. ಮತದಾನವು ಬೆಳಿಗ್ಗೆ 10ರ ಬದಲಿಗೆ 9 ಗಂಟೆಗೆ ಆರಂಭಿಸಲು ಚುನಾವಣಾಧಿಕಾರಿ ಒಪ್ಪಿದ್ದಾರೆ.
ಸ್ವಯಂ ಸೇವಕರಾಗಿ ಉನ್ನತಾಧಿಕಾರ ಸಮಿತಿ ನೇಮಕ ಮಾಡಿಕೊಂಡಿರದ ಹೊರತು ಕಾನೂನು ಪದವಿ ಪಡೆಯದ ಮತ್ತು ಎಎಬಿ ಸದಸ್ಯರಲ್ಲದ ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತಿಲ್ಲ.
ಚುನಾವಣೆಯಂದು ಬೆಳಿಗ್ಗೆ 6ರಿಂದ ಸಂಜೆ 4 ವರೆಗೆ ಕೆ ಆರ್ ವೃತ್ತದಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಸಾರ್ವಜನಿಕರ ಓಡಾಟ ನಿರ್ಬಂಧಿಸಲಾಗಿದೆ. ಅಂದು ಈ ರಸ್ತೆಯನ್ನು ಎಎಬಿ ಸ್ಮಾರ್ಟ್‌ಕಾರ್ಡ್ ಹೊಂದಿರುವವರು ಮಾತ್ರ ಬಳಕೆ ಮಾಡಬಹುದಾಗಿದೆ. ಯಾರನ್ನೂ ನುಸುಳುವಂತೆ ಪೊಲೀಸ್ ಸಿಬ್ಬಂದಿಯ ಮೇಲೆ ಒತ್ತಡ ಹಾಕಬಾರದು.
ಚುನಾವಣೆ ಮುಗಿದ ಬಳಿಕ ಉನ್ನತಾಧಿಕಾರ ಸಮಿತಿಯು ಈ ಸಂಬಂಧ ವರದಿ ಸಲ್ಲಿಸಬೇಕು ಎಂದು ಆದೇಶಿಸಿರುವ ಹೈಕೋರ್ಟ್, ವಿಚಾರಣೆಯನ್ನು ಫೆಬ್ರವರಿ 24ಕ್ಕೆ ಮುಂದೂಡಿದೆ.
ವಿಚಾರಣೆಯಲ್ಲಿ ಹಿರಿಯ ವಕೀಲರಾದ ಕೆ ಎನ್ ಫಣೀಂದ್ರ, ವಿವೇಕ್ ಸುಬ್ಬಾರೆಡ್ಡಿ, ಎಂ ಆರ್ ರಾಜಗೋಪಾಲ, ವಕೀಲರಾದ ಟಿ ಜಿ ರವಿ, ಎನ್ ಪಿ ಅಮೃತೇಶ್ ಮತ್ತಿತರರು ಭಾಗಿಯಾಗಿದ್ದರು.