ಮನೆ ಸುದ್ದಿ ಜಾಲ ಕರ್ನಾಟಕದಲ್ಲಿ ಜಾನುವಾರುಗಳಿಗೆ ಡಿಜಿಟಲ್ ಗುರುತು ವ್ಯವಸ್ಥೆ: ದೇಶದಲ್ಲೇ ಮೊದಲ ಬಾರಿ ಹೊಸ ತಂತ್ರಜ್ಞಾನ ಜಾರಿ

ಕರ್ನಾಟಕದಲ್ಲಿ ಜಾನುವಾರುಗಳಿಗೆ ಡಿಜಿಟಲ್ ಗುರುತು ವ್ಯವಸ್ಥೆ: ದೇಶದಲ್ಲೇ ಮೊದಲ ಬಾರಿ ಹೊಸ ತಂತ್ರಜ್ಞಾನ ಜಾರಿ

0

ಬೆಂಗಳೂರು, ಮೇ 22: ಜಾನುವಾರುಗಳ ಆರೋಗ್ಯ ಮಾಹಿತಿ, ಲಸಿಕೆ ದಾಖಲೆ, ವಿಮೆ ವಿವರಗಳು ಹಾಗೂ ಸಾವಿನ ಪರಿಹಾರ ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ನಿರ್ವಹಿಸಲು ಕರ್ನಾಟಕ ಸರ್ಕಾರ ಮಹತ್ವದ ಡಿಜಿಟಲ್ ಯೋಜನೆ ಜಾರಿಗೆ ತರಲು ಮುಂದಾಗಿದೆ. ಜಾನುವಾರುಗಳ ಮೂಗಿನ ವಿನ್ಯಾಸವನ್ನು ಆಧರಿಸಿದ ಮಜಲ್ ಬಯೋಮೆಟ್ರಿಕ್ಸ್ ತಂತ್ರಜ್ಞಾನ ಬಳಸಿ ಡಿಜಿಟಲ್ ಗುರುತು ನೀಡುವ ಈ ವ್ಯವಸ್ಥೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ಬರುತ್ತಿದೆ.

ರಾಜ್ಯ ಸರ್ಕಾರ ರೂಪಿಸುತ್ತಿರುವ ಈ ಹೊಸ ವ್ಯವಸ್ಥೆ ಜಾನುವಾರುಗಳಿಗೆ ಆಧಾರ್ ಮಾದರಿಯ ಡಿಜಿಟಲ್ ಗುರುತಿನ ಚೀಟಿಯಾಗಿ ಕಾರ್ಯನಿರ್ವಹಿಸಲಿದೆ. ಬಾರ್ಕೋಡ್ ಆಧಾರಿತ ಗುರುತಿನ ಮೂಲಕ ಪ್ರತಿಯೊಂದು ಜಾನುವಾರದ ಸಂಪೂರ್ಣ ಮಾಹಿತಿ ಡಿಜಿಟಲ್ ರೂಪದಲ್ಲಿ ಸಂಗ್ರಹವಾಗಲಿದೆ. ಇದುವರೆಗೆ ಜಾನುವಾರುಗಳಿಗೆ ಕಿವಿಯಲ್ಲಿ ಟ್ಯಾಗ್ ಅಳವಡಿಸಿ ಗುರುತಿಸುವ ಪದ್ಧತಿ ಜಾರಿಯಲ್ಲಿತ್ತು. ಆದರೆ ಹೊಸ ತಂತ್ರಜ್ಞಾನದಿಂದ ಆ ಹಳೆಯ ವಿಧಾನಕ್ಕೆ ಪರ್ಯಾಯ ವ್ಯವಸ್ಥೆ ಸಿಗಲಿದೆ.

ಈ ಯೋಜನೆಯ ಮೂಲಕ ರೈತರು ತಮ್ಮ ಜಾನುವಾರುಗಳ ಆರೋಗ್ಯದ ಮಾಹಿತಿ, ಲಸಿಕೆ ದಿನಾಂಕಗಳು ಹಾಗೂ ವಿಮೆ ಸಂಬಂಧಿತ ದಾಖಲೆಗಳನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ. ಜೊತೆಗೆ ಜಾನುವಾರು ಮೃತಪಟ್ಟ ಸಂದರ್ಭದಲ್ಲಿಯೂ ಪರಿಹಾರಕ್ಕೆ ಅಗತ್ಯ ದಾಖಲೆಗಳನ್ನು ತ್ವರಿತವಾಗಿ ಪರಿಶೀಲಿಸಲು ಸಾಧ್ಯವಾಗಲಿದೆ. ಸರ್ಕಾರದ ವಿವಿಧ ಪಶುಸಂಗೋಪನೆ ಯೋಜನೆಗಳ ಲಾಭವನ್ನು ಪಾರದರ್ಶಕವಾಗಿ ತಲುಪಿಸುವುದಕ್ಕೂ ಈ ವ್ಯವಸ್ಥೆ ನೆರವಾಗಲಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಈ ಕುರಿತು ಮಾಹಿತಿ ನೀಡಿ, ಮಾನವರ ಬೆರಳಚ್ಚಿನಂತೆ ಜಾನುವಾರುಗಳ ಮೂಗಿನ ರೇಖೆಗಳೂ ವಿಶಿಷ್ಟವಾಗಿರುತ್ತವೆ ಎಂದು ತಿಳಿಸಿದ್ದಾರೆ. ಅದನ್ನೇ ಆಧಾರವನ್ನಾಗಿ ಮಾಡಿಕೊಂಡು ಡಿಜಿಟಲ್ ಗುರುತಿನ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವ್ಯವಸ್ಥೆಯಿಂದ ಜಾನುವಾರುಗಳ ನಕಲಿ ದಾಖಲೆ ಸೃಷ್ಟಿಸುವುದು ಹಾಗೂ ಯೋಜನೆಗಳಲ್ಲಿ ವಂಚನೆ ನಡೆಸುವ ಸಾಧ್ಯತೆ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪಶುಸಂಗೋಪನೆ ಇಲಾಖೆಯ ಸೇವೆಗಳಲ್ಲಿ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ಆಡಳಿತ ವ್ಯವಸ್ಥೆಯೂ ಮತ್ತಷ್ಟು ಸುಧಾರಣೆಯಾಗಲಿದೆ ಎನ್ನಲಾಗಿದೆ.

ಮುಂದಿನ ಹಂತದಲ್ಲಿ ರೈತರು ತಮ್ಮ ಮೊಬೈಲ್ ಮೂಲಕವೇ ಜಾನುವಾರುಗಳ ಫೋಟೋಗಳನ್ನು ಅಪ್ಲೋಡ್ ಮಾಡುವ ಅವಕಾಶ ಕೂಡ ದೊರೆಯಲಿದೆ. ಜಾನುವಾರುಗಳ ಆರೋಗ್ಯ ಪರಿಶೀಲನೆಗೆ ಸಂಬಂಧಿಸಿದ ಡಿಜಿಟಲ್ ದಾಖಲೆಗಳನ್ನು ಕೂಡ ಈ ವ್ಯವಸ್ಥೆಯಲ್ಲಿ ಸಂಗ್ರಹಿಸಬಹುದಾಗಿದೆ. ಹೊಸದಾಗಿ ಜನಿಸುವ ಕರುಗಳಿಗೂ ತಕ್ಷಣ ಡಿಜಿಟಲ್ ನೋಂದಣಿ ಮಾಡುವ ವ್ಯವಸ್ಥೆ ಇರಲಿದೆ.

ಇದರ ಜೊತೆಗೆ ರೈತರಿಗೆ ಜಾನುವಾರುಗಳ ಲಸಿಕೆ ದಿನಾಂಕಗಳ ಬಗ್ಗೆ ಮೊಬೈಲ್ ಸಂದೇಶಗಳ ಮೂಲಕ ಮುನ್ನೆಚ್ಚರಿಕೆ ನೀಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ಲಸಿಕೆ ನೀಡಲು ಇದು ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಮೂಗಿನ ಫೋಟೋ ಸ್ಕ್ಯಾನ್ ಮಾಡುವ ಮೂಲಕವೇ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸುವ ತಂತ್ರಜ್ಞಾನವನ್ನು ಕೂಡ ಪರಿಚಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕೃತಕ ಬುದ್ಧಿಮತ್ತೆ ಆಧಾರಿತ ಈ ವ್ಯವಸ್ಥೆ ಪಶುಸಂಗೋಪನೆ ಕ್ಷೇತ್ರದಲ್ಲಿ ಡಿಜಿಟಲ್ ಆಡಳಿತವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಇದೆ. ಜಾನುವಾರುಗಳ ಟ್ರ್ಯಾಕಿಂಗ್, ಗುರುತಿನ ಪರಿಶೀಲನೆ ಹಾಗೂ ಆರೋಗ್ಯ ಮೇಲ್ವಿಚಾರಣೆ ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಯೋಜನೆ ನೆರವಾಗಲಿದೆ ಎಂದು ವರದಿಗಳು ತಿಳಿಸಿವೆ.