ನವದೆಹಲಿ: ತ್ವರಿತ ವಿಶೇಷ ನ್ಯಾಯಾಲಯಗಳ (ಎಫ್ಟಿಎಸ್ಸಿ) ಸ್ಥಾಪನೆ ಮತ್ತು ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಒತ್ತಾಯಿಸಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣ ದೇವಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಎಫ್ಟಿಎಸ್ಸಿ ಸ್ಥಾಪಿಸುವ ಮೂಲಕ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವ ಮೂಲಕ ಸಂತ್ರಸ್ತರಿಗೆ ಸೂಕ್ತ ನ್ಯಾಯವನ್ನು ಒದಗಿಸುವಂತೆ ಅನ್ನಪೂರ್ಣ ದೇವಿ ಮನವಿ ಮಾಡಿದ್ದಾರೆ.
ಆಗಸ್ಟ್ 25ರಂದು ಬರೆದಿದ್ದ ಹಿಂದಿನ ಪತ್ರವನ್ನು ಉಲ್ಲೇಖಿಸಿರುವ ಅವರು ಅತ್ಯಾಚಾರ ಮತ್ತು ಕೊಲೆಯಂತಹ ಅಪರಾಧಗಳಿಗೆ ಕಠಿಣ ಕಾನೂನು ಮತ್ತು ಶಿಕ್ಷೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ.
ಪಶ್ಚಿಮ ಬಂಗಾಳವು 88 ಎಫ್ಟಿಸಿಗಳನ್ನು ಸ್ಥಾಪಿಸಿದ್ದರೆ, ಇವುಗಳು ಕೇಂದ್ರ ಸರ್ಕಾರದ ಯೋಜನೆಯಡಿ ಶಿಫಾರಸು ಮಾಡಲಾದ ಎಫ್ಟಿಎಸ್ಸಿಗಳಂತೆಯೇ ಇಲ್ಲ ಎಂದು ಅನ್ನಪೂರ್ಣ ದೇವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಂಗಾಳದಲ್ಲಿರುವ ಎಫ್ಟಿಸಿಗಳು ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣಗಳಿಗೆ ಪ್ರತ್ಯೇಕವಾಗಿ ಮೀಸಲಾಗುವುದಕ್ಕಿಂತ ಹೆಚ್ಚಾಗಿ ನಾಗರಿಕ ವಿವಾದಗಳನ್ನು ಒಳಗೊಂಡಂತೆ ವಿವಿಧ ಪ್ರಕರಣಗಳನ್ನು ನಿರ್ವಹಿಸುತ್ತಿವೆ ಎಂದು ಅನ್ನಪೂರ್ಣ ದೇವಿ ತಿಳಿಸಿದ್ದಾರೆ.
2024ರ ಜೂನ್ 30ರ ವೇಳೆಗೆ ಎಫ್ಟಿಸಿಗಳಲ್ಲಿ 81,000ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಆ ಪೈಕಿ 48,600 ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣಗಳೇ ಇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆಗಸ್ಟ್ 9ರಂದು ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯನ್ನು ಹತ್ಯೆ ಮಾಡಲಾಗಿತ್ತು. ಘಟನೆ ಸಂಬಂಧ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.