ಬೆಂಗಳೂರು : ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ 11 ಮಂದಿ ಸರ್ಕಾರಿ ಅಧಿಕಾರಿಗಳು ಹಾಗೂ ಒಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸೇರಿದ 60 ಸ್ಥಳಗಳಲ್ಲಿ ಶುಕ್ರವಾರ ಶೋಧ ನಡೆಸಿರುವ ಲೋಕಾಯುಕ್ತ ಪೊಲೀಸರು, ಒಟ್ಟು ₹1.20 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಬಳಿ ಒಟ್ಟು ₹49.85 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಲಾಗಿದೆ. ಈ ಪೈಕಿ ₹33.85 ಕೋಟಿ ಮೌಲ್ಯದ ಸ್ಥಿರಾಸ್ತಿ, ₹5.70 ಕೋಟಿ ಮೌಲ್ಯದ ಚಿನ್ನಾಭರಣ, ₹2.05 ಕೋಟಿ ಮೌಲ್ಯದ ವಾಹನಗಳು, ₹4.05 ಕೋಟಿ ಮೌಲ್ಯದ ಇತರ ಸ್ವತ್ತುಗಳು ಸೇರಿವೆ ಎಂದು ಲೋಕಾಯುಕ್ತ ಪೊಲೀಸ್ ವಿಭಾಗದ ಪ್ರಕಟಣೆ ತಿಳಿಸಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 12 ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿರುವ ಕೆಎಎಸ್ ಅಧಿಕಾರಿ ಸಿ.ಎಲ್. ಆನಂದ್, ಇನ್‌ವೆಸ್ಟ್ ಕರ್ನಾಟಕ ಫೋರಂನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಸಿ.ಟಿ. ಮುದ್ದುಕುಮಾರ್, ಕಾನೂನು ಮಾಪನಶಾಸ್ತ್ರ ಇಲಾಖೆಯ ಬೆಂಗಳೂರು ನಗರದ ಉಪ ನಿಯಂತ್ರಕ ಮೀರ್ ಅತ್ಥರ್ ಅಲಿ, ಮೈಸೂರು ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್, ಹೆಬ್ಬಗೋಡಿ ನಗರಸಭೆ ಆಯುಕ್ತ ಕೆ. ನರಸಿಂಹಮೂರ್ತಿ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ರಮೇಶ್ ಕುಮಾರ್, ತೋಟಗಾರಿಕೆ ಇಲಾಖೆಯ ಶಿವಮೊಗ್ಗ ಜಿಲ್ಲಾ ಉಪ ನಿರ್ದೇಶಕ ಪ್ರಕಾಶ್ ಜಿ.ಎನ್., ಯಾದಗಿರಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಬಲವಂತ ರಾಥೋಡ್, ದೊಡ್ಡಬಳ್ಳಾಪುರ ತಾಲ್ಲೂಕಿನ ರಾಮೇಶ್ವರದ ಪಶುಸಂಗೋಪನಾ ನಿರೀಕ್ಷಕ ಆರ್. ಸಿದ್ದಪ್ಪ, ಕೆಐಎಡಿಬಿ ಭೂಸ್ವಾಧೀನಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಬಿ.ವಿ. ರಾಜ, ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಂಜುನಾಥ್ ಟಿ.ಆರ್. ಮತ್ತು ಭದ್ರಾವತಿ ತಾಲ್ಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮೇಲೆ ದಾಳಿ ನಡೆದಿದೆ.
ಚೇತನ್ ಕುಮಾರ್ ಮನೆಯಲ್ಲಿ ಅತ್ಯಧಿಕ ₹58 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಅತ್ಥರ್ ಅಲಿ ಮನೆಯಲ್ಲಿ ₹28.15 ಲಕ್ಷ ನಗದು ಪತ್ತೆಯಾಗಿದ್ದರೆ, ಪ್ರಕಾಶ್ ಜಿ.ಎನ್. ಮನೆಯಲ್ಲಿ ₹12.86 ಲಕ್ಷ ನಗದು ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಲೋಕಾಯುಕ್ತದ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಥಾಕೂರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಂಸ್ಥೆಯ ಪೊಲೀಸ್ ವಿಭಾಗದ 85 ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.
ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ನಿರ್ದೇಶಕರಾಗಿದ್ದು, ನಿಯೋಜನೆ ಮೇಲೆ ಇನ್ವೆಸ್ಟ್ ಕರ್ನಾಟಕ ಫೋರಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ.ಟಿ. ಮುದ್ದುಕುಮಾರ್ ಅವರ ಬ್ಯಾಂಕ್ ಲಾಕರ್‌ನಲ್ಲಿ ದುಬಾರಿ ಬೆಲೆಯ ಹ್ಯೂಬ್ಲೊ ಮತ್ತು ಫಾಸಿಲ್ ಕೈಗಡಿಯಾರಗಳು ಪತ್ತೆಯಾಗಿವೆ.
ಮುದ್ದುಕುಮಾರ್ ಅವರ ತೋಟದ ಮನೆಯಲ್ಲಿ ಪಿಸ್ತೂಲ್ ಮತ್ತು ಏರ್ ಗನ್ ಕೂಡ ಪತ್ತೆಯಾಗಿವೆ. ಕೆಐಎಡಿಬಿಯಿಂದಲೇ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ₹3 ಕೋಟಿ ಮೌಲ್ಯದ ಕೈಗಾರಿಕಾ ಶೆಡ್ ಪಡೆದಿರುವುದು ಪತ್ತೆಯಾಗಿದೆ.
ಲೋಕಾಯುಕ್ತ ಪೊಲೀಸರು ದಾಳಿ ನಡೆಸಿರುವುದು ಗೊತ್ತಾಗುತ್ತಿದ್ದಂತೆಯೇ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಚೀಲವೊಂದರಲ್ಲಿ ಹಾಕಿ ಪಕ್ಕದ ಮನೆಯ ಆವರಣಕ್ಕೆ ಅಧಿಕಾರಿ ಮೀರ್ ಅತ್ಥರ್ ಅಲಿ ಎಸೆದಿದ್ದರು. ‘ಆರೋಪಿಯು ಚೀಲವನ್ನು ಎಸೆದ ಶಬ್ದ ಅಧಿಕಾರಿಗಳಿಗೆ ಕೇಳಿಸಿತ್ತು. ಚೀಲವನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ ಘಟಕ–2ರ ಎಸ್‌ಪಿ ಕೆ. ವಂಶಿಕೃಷ್ಣ ತಿಳಿಸಿದರು.
ವಿ.ಎಯಿಂದ ₹1.10 ಕೋಟಿಗೂ ಅಧಿಕ ನಗದು ವಶ
ರಾಮದುರ್ಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಹಲಗತ್ತಿ ಚೆಕ್ ಪೋಸ್ಟ್ ಬಳಿ ಗ್ರಾಮ ಲೆಕ್ಕಾಧಿಕಾರಿಯೊಬ್ಬರು (ವಿ.ಎ) ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹1.10 ಕೋಟಿಗೂ ಅಧಿಕ ನಗದನ್ನು ರಾಮದುರ್ಗ ಪೊಲೀಸರು ಶುಕ್ರವಾರ ವಶಕ್ಕೆ ಪಡೆದರು.
ನಿಪ್ಪಾಣಿಯ ಗ್ರಾಮ ಲೆಕ್ಕಾಧಿ ಕಾರಿ, ರಾಮದುರ್ಗ ತಾಲ್ಲೂಕಿನ ಹೊಸೂರು ಗ್ರಾಮದ ವಿಠ್ಠಲ ಶಿವಪ್ಪ ಢವಳೇಶ್ವರ ಅವರು ತಮ್ಮ ಕಾರಿನಲ್ಲಿ ಈ ಹಣ ಸಾಗಿಸುತ್ತಿದ್ದರು. ಬಾಗಲಕೋಟೆಗೆ ಹಣ ಸಾಗಣೆ ಆಗುತಿತ್ತು. ಖಚಿತ ಮಾಹಿತಿ ಆಧಾರದಲ್ಲಿ ಕಾರು ಪರಿಶೀಲಿಸಿದ ಪೊಲೀಸರಿಗೆ ₹1.10 ಕೋಟಿ ನಗದು ಸಿಕ್ಕಿದೆ. ಹಣವನ್ನು ಪೊಲೀಸರು ವಶಕ್ಕೆ ಪಡೆದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು.