ಮನೆ ಕಾನೂನು ಮುಡಾ ಪ್ರಕರಣ: ಸಚಿವ ಜಮೀರ್‌ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ- ಸೂಕ್ತ ಕ್ರಮಕ್ಕೆ ಎಜಿಗೆ ರಾಜ್ಯಪಾಲರ...

ಮುಡಾ ಪ್ರಕರಣ: ಸಚಿವ ಜಮೀರ್‌ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ- ಸೂಕ್ತ ಕ್ರಮಕ್ಕೆ ಎಜಿಗೆ ರಾಜ್ಯಪಾಲರ ನಿರ್ದೇಶನ

0

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತನಿಖೆಗೆ ಅನುಮತಿಸಿದ್ದ ರಾಜ್ಯಪಾಲರ ಕ್ರಮವನ್ನು ಎತ್ತಿ ಹಿಡಿದ್ದ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ‘ರಾಜಕೀಯ ತೀರ್ಪು’ ಎಂದು ವ್ಯಾಖ್ಯಾನಿಸಿದ್ದ ವಸತಿ ಸಚಿವ ಬಿ ಝಡ್‌ ಜಮೀರ್‌ ಅಹ್ಮದ್‌ ಖಾನ್ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವ ಕುರಿತು ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕಾನೂನಿನ ಅನ್ವಯ ಕ್ರಮಕೈಗೊಳ್ಳುವಂತೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರಿಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಈಚೆಗೆ ನಿರ್ದೇಶಿಸಿದ್ದಾರೆ.

Join Our Whatsapp Group

“ಹೈಕೋರ್ಟ್‌ ತೀರ್ಪಿನ ಬಗ್ಗೆ ಗಂಭೀರ ಆರೋಪ ಮಾಡುವ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯವನ್ನು ಸಚಿವ ಜಮೀರ್‌ ಪ್ರಶ್ನಿಸಿದ್ದಾರೆ ಎಂದು ಆಕ್ಷೇಪಿಸಿ ಟಿ ಜೆ ಅಬ್ರಹಾಂ ಸಲ್ಲಿಸಿರುವ ಮನವಿ ಮತ್ತು ಅದರ ಜೊತೆಗೆ ಅವರು ಸಲ್ಲಿಸಿರುವ ದಾಖಲೆಗಳನ್ನು ತಮಗೆ ವರ್ಗಾಯಿಸಲಾಗಿದೆ. ಈ ಸಂಬಂಧ ಕಾನೂನಿನ ಅನ್ವಯ ಸೂಕ್ತ ಕ್ರಮಕೈಗೊಳ್ಳಬೇಕು” ಎಂದು ರಾಜ್ಯಪಾಲರ ಸೂಚನೆಯಂತೆ ಅವರ ವಿಶೇಷ ಕಾರ್ಯದರ್ಶಿ ಆರ್‌ ಪ್ರಭುಶಂಕರ್‌ ಅವರು ಅಡ್ವೊಕೇಟ್‌ ಜನರಲ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಅಡ್ವೊಕೇಟ್‌ ಜನರಲ್‌ಗೆ ಸೆಪ್ಟೆಂಬರ್‌ 29ರಂದು ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್‌ 151(1)(ಬಿ) ಅಡಿ ಜಮೀರ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿ ಕೋರಿದ್ದೇನೆ. ಆದರೆ, ಇದುವರೆಗೂ ಅಡ್ವೊಕೇಟ್‌ ಜನರಲ್‌ ಅವರು ತಮ್ಮ ಮನವಿಗೆ ಪ್ರತಿಕ್ರಿಯಿಸಿಲ್ಲ ಎಂದು ರಾಜ್ಯಪಾಲರಿಗೆ ನೀಡಿರುವ ಮನವಿಯಲ್ಲಿ ಅಬ್ರಹಾಂ ದೂರಿದ್ದಾರೆ.

ಅಡ್ವೊಕೇಟ್‌ ಜನರಲ್‌ ಅವರು ನ್ಯಾಯಾಂಗ ವ್ಯವಸ್ಥೆಯ ಪ್ರಾವಿತ್ರ್ಯತೆ ಎತ್ತಿ ಹಿಡಿಯುವ ಮತ್ತು ಸಂಸ್ಥೆಯ ಘನತೆಯನ್ನು ಉಳಿಸುವ ಜವಾಬ್ದಾರಿ ಹೊಂದಿದ್ದಾರೆ. ಸಚಿವ ಜಮೀರ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿ ನೀಡುವುದಕ್ಕೆ ವಿಳಂಬ ಮಾಡುತ್ತಿರುವುದು ಪಕ್ಷಪಾತದಿಂದ ನಿಲುವಿನಂತೆ ಭಾಸವಾಗುತ್ತಿದೆ ಎಂದು ಆಕ್ಷೇಪಿಸಲಾಗಿದೆ.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರು ಬದ್ಧತೆ ತೋರಿದಂತೆ ಕಂಡಿದೆ. ಸಂವಿಧಾನದ 165(3) ವಿಧಿಯ ಅನ್ವಯ ರಾಜ್ಯಪಾಲರ ಸೂಚನೆಯಂತೆ ಅಡ್ವೊಕೇಟ್‌ ಜನರಲ್‌ ಅಧಿಕಾರದಲ್ಲಿ ಮುಂದುವರಿಬಹುದು. ಯಾವುದೇ ಸಂದರ್ಭದಲ್ಲಿ ರಾಜ್ಯಪಾಲರು ಅಡ್ವೊಕೇಟ್‌ ಜನರಲ್‌ ಅನ್ನು ಹುದ್ದೆಯಿಂದ ತೆಗೆಯಬಹುದು ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸುವ ಮೂಲಕ ವಸತಿ ಸಚಿವ ಬಿ ಝಡ್‌ ಜಮೀರ್‌ ಅಹ್ಮದ್‌ ಖಾನ್ ನ್ಯಾಯಾಂಗ ನಿಂದನೆ ಎಸಗಿದ್ದು, ಅವರ ವಿರುದ್ಧ‌ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿಸುವಂತೆ ಕೋರಿ ರಾಜ್ಯ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರಿಗೆ ಸಾಮಾಜಿಕ ಕಾರ್ಯಕರ್ತ ಟಿ ಜಿ ಅಬ್ರಹಾಂ ಪತ್ರ ಬರೆದಿದ್ದರು.