ಮನೆ ಕಾನೂನು ದೋಷಿ ಜನ ಪ್ರತಿನಿಧಿಗಳನ್ನು ಅನರ್ಹಗೊಳಿಸುವ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 8(3) ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ದೋಷಿ ಜನ ಪ್ರತಿನಿಧಿಗಳನ್ನು ಅನರ್ಹಗೊಳಿಸುವ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 8(3) ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

0

ನ್ಯಾಯಾಲಯಗಳಲ್ಲಿ ದೋಷಿಗಳೆಂದು ತೀರ್ಮಾನಿಸಲಾದ ಸಂಸದರು ಅಥವಾ ಶಾಸಕರು ತನ್ನಿಂತಾನೇ ಅನರ್ಹಗೊಳ್ಳಲು ಕಾರಣವಾಗುವ ಜನ ಪ್ರತಿನಿಧಿ ಕಾಯಿದೆಯ ಸೆಕ್ಷನ್ 8(3) ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲಾಗಿದ್ದು ಚುನಾಯಿತ ಪ್ರತಿನಿಧಿಗಳ ವಿರುದ್ಧ ಲಿಲಿ ಥಾಮಸ್ ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

[ಆಭಾ ಮುರಳೀಧರನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಸಾಮಾಜಿಕ ಕಾರ್ಯಕರ್ತೆ ಆಭಾ ಮುರಳೀಧರನ್ ಅವರು ಸಲ್ಲಿಸಿರುವ ಮನವಿಯಲ್ಲಿ ಚುನಾಯಿತ ಸಂಸದರು ಅಥವಾ ಶಾಸಕರ ವಾಕ್ ಸ್ವಾತಂತ್ರ್ಯವನ್ನು ಆಕ್ಷೇಪಿಸಲಾದ ಸೆಕ್ಷನ್ 8(3) ಮೊಟಕುಗೊಳಿಸುತ್ತದೆ ಮತ್ತು ಶಾಸನ ರೂಪಿಸುವವರು ತಮ್ಮ ಕ್ಷೇತ್ರದ ಮತದಾರರು ವಿಧಿಸಿರುವ ಕರ್ತವ್ಯಗಳನ್ನು ಮುಕ್ತವಾಗಿ ನಿರ್ವಹಿಸಲು ಇದು ನಿರ್ಬಂಧ ವಿಧಿಸುವುದರಿಂದ ಇದು ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಬೆನ್ನಿಗೇ ಸಲ್ಲಿಸಲಾದ ಈ ಅರ್ಜಿ ಮಹತ್ವ ಪಡೆದುಕೊಂಡಿದೆ.

ಅರ್ಜಿಯ ಪ್ರಮುಖಾಂಶಗಳು

• ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 8 ಎ, 9, 9 ಎ, 10, 10 ಎ ಹಾಗೂ 11ರ ಉಪ ಸೆಕ್ಷನ್ (1)ಕ್ಕೆ ಸೆಕ್ಷನ್ 8 (3) ಸಂಪೂರ್ಣ ವ್ಯತಿರಿಕ್ತವಾಗಿದೆ.

• ಜನ ಪ್ರತಿನಿಧಿ ಕಾಯಿದೆಯ ಅಧ್ಯಾಯ IIIರ ಅಡಿಯಲ್ಲಿ ಅನರ್ಹತೆ ಪರಿಗಣಿಸುವಾಗ ಸ್ವಭಾವ, ಅಪರಾಧದ ಗುರುತ್ವ, ಪಾತ್ರ, ನೈತಿಕ ಕ್ಷೋಭೆ ಹಾಗೂ ಅಪರಾಧದಲ್ಲಿ ಆರೋಪಿಗಳ ಪಾತ್ರ ಎಷ್ಟು ಎಂಬಂತಹ ಅಂಶಗಳನ್ನು ಪರಿಶೀಲಿಸಬೇಕು.

• ಕಾಯಿದೆಯ ಸೆಕ್ಷನ್ 8ರ ಉಪ ಷರತ್ತು (1) ಅಪರಾಧಗಳ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಸಂಸದರ ಅನರ್ಹತೆಗೆ ಅಗತ್ಯವಾದ ಅಪರಾಧಗಳನ್ನು ಸ್ಪಷ್ಟವಾಗಿ ವರ್ಗೀಕರಿಸುತ್ತದೆ. ಆದರೂ ಅಪರಾಧ ಸಾಬೀತಾದರೆ ತನ್ನಿಂತಾನೇ ಅನರ್ಹಗೊಳಿಸಬಹುದು ಎಂದು ಅದೇ ಸೆಕ್ಷನ್ನ ಉಪ-ಕಲಂ (3) ಹೇಳುತ್ತದೆ. ಇವು ತದ್ವಿರುದ್ಧವಾಗಿವೆ.

• ಕಾಯಿದೆಯನ್ನು ರೂಪಿಸುವಾಗ ಗಂಭೀರ/ ಘೋರ ಅಪರಾಧ ಎಸಗಿದ ಚುನಾಯಿತ ಜನಪ್ರತಿನಿಧಿಯನ್ನು ಅನರ್ಹಗೊಳಿಸುವುದು ಶಾಸಕಾಂಗದ ಉದ್ದೇಶವಾಗಿತ್ತು.

• ಕಾಯಿದೆಯ ಸೆಕ್ಷನ್ 8(4) ಅನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್, ಲಿಲಿ ಥಾಮಸ್ ಪ್ರಕರಣದಲ್ಲಿ ನೀಡಿದ ತೀರ್ಪನ್ನು ವೈಯಕ್ತಿಕ ಸೇಡು ತೀರಿಸಿಕೊಳ್ಳಲು ರಾಜಕೀಯ ಪಕ್ಷಗಳು ದುರುಪಯೋಗಪಡಿಸಿಕೊಳ್ಳುತ್ತಿವೆ.  ತಮಗೆ ವಿಧಿಸಲಾದ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಸೆಕ್ಷನ್ 8(4) ಮೂರು ತಿಂಗಳ ಕಾಲಾವಕಾಶ ನೀಡುತ್ತಿತ್ತು. ಇದರಿಂದ ತಕ್ಷಣವೇ ಅನರ್ಹಗೊಳಿಸುವುದು ತಪ್ಪುತ್ತಿತ್ತು.

• ಅಲ್ಲದೆ “Shall Stand” (ಖಚಿತವಾಗಿ ಹೇಳುವುದು) ಅಥವಾ “ತಕ್ಷಣ” ಎಂಬ ಪದಗಳು ಸೆಕ್ಷನ್ 8(3)ರಲ್ಲಿ ಇಲ್ಲ. ಇವುಗಳ ಅನುಪಸ್ಥಿತಿಯಲ್ಲಿ ಜನಪ್ರತಿನಿಧಿಗಳನ್ನು ತನ್ನಿಂತಾನೇ ಅನರ್ಹಗೊಳಿಸುವಂತಿಲ್ಲ. 

ಹಿಂದಿನ ಲೇಖನಮುಂದಿನ 6 ತಿಂಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ: ನಿತಿನ್ ಗಡ್ಕರಿ
ಮುಂದಿನ ಲೇಖನಆಲೂಗಡ್ಡೆಯನ್ನು ಫ್ರೈ ಮಾಡಿ ತಿನ್ನಬಾರದಂತೆ ಗೊತ್ತಾ?