ಮನೆ ಕಾನೂನು ಪಿಎಸ್‌ಐ ಹಗರಣ: ಪಿಎಂಎಲ್‌ಎ ಅಡಿ ಪ್ರಕರಣ; ಐವರು ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳಲು ನ್ಯಾಯಾಲಯಕ್ಕೆ ಇ ಡಿ...

ಪಿಎಸ್‌ಐ ಹಗರಣ: ಪಿಎಂಎಲ್‌ಎ ಅಡಿ ಪ್ರಕರಣ; ಐವರು ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳಲು ನ್ಯಾಯಾಲಯಕ್ಕೆ ಇ ಡಿ ಕೋರಿಕೆ

0

ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆಯಾಗಿರುವ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದೆ. ಇದರ ಮುಂದುವರಿದ ಭಾಗವಾಗಿ, ಹಗರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿ ಕೋರಿ ಬೆಂಗಳೂರಿನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯವು ಈಚೆಗೆ ಅರ್ಜಿ ಸಲ್ಲಿಸಿದೆ.

ಆರೋಪಿಗಳಾದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಡಿ ಹರ್ಷ, ಆರ್‌ ಮಂಜುನಾಥ್‌, ಆರ್‌ ಶರತ್‌ ಕುಮಾರ್, ಶಾಂತಕುಮಾರ ಹಾಗೂ ಎಸ್‌ ಜಾಗೃತ್‌ ಅವರ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ಕಾಯಿದೆ 2002ರ ಸೆಕ್ಷನ್‌ 50 (2) ಮತ್ತು (3)ರ ಅಡಿ ದಾಖಲಿಸಿಕೊಳ್ಳಲು ಅನುಮತಿಸುವಂತೆ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರಿಗೆ ಕೋರಿಕೆ ಸಲ್ಲಿಸಲಾಗಿದೆ.

ಪಿಎಂಎಲ್‌ ಸೆಕ್ಷನ್‌ 2(1)(ಎನ್‌ಎ) ಅಡಿ ತನಿಖೆ ನಡೆಸಲು ಹಾಗೂ ಪಿಎಂಎಲ್‌ಎ ಸೆಕ್ಷನ್‌ 54ರ ಅಡಿ ತನಿಖೆ ಕೈಗೊಳ್ಳಲು ಪೊಲೀಸ್‌ ಅಧಿಕಾರಿಗಳು ಸಹಕರಿಸಲು ಅನುಮತಿ ನೀಡಬೇಕು. ನ್ಯಾಯಾಂಗ ಬಂಧನದಲ್ಲಿರುವ ಮೇಲಿನ ಆರೋಪಿಗಳಿಂದ ಲಿಖಿತ ಹೇಳಿಕೆ ದಾಖಲಿಸಿಕೊಳ್ಳಲು ಇ ಡಿ ಗೆ ಸೇರಿದ ಇಬ್ಬರು ಅಧಿಕಾರಿಗಳು ಲ್ಯಾಪ್‌ಟಾಪ್‌, ಪ್ರಿಂಟರ್ಸ್‌ ಕೊಂಡೊಯ್ಯಲು ಅನುಮತಿಸಬೇಕು. ಅರ್ಜಿದಾರರಿಗೆ ಸಹಕರಿಸುವಂತೆ ಮತ್ತು ಹೇಳಿಕೆ ದಾಖಲಿಸಿಕೊಳ್ಳುವಾಗ ಉಪಸ್ಥಿತರುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶಿಸಿಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 120(ಬಿ), 420, 471ಗಳು ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ 2(1)(ಎಕ್ಸ್‌) ಮತ್ತು (ವೈ) ಅಡಿ ಷೆಡ್ಯೂಲ್ಡ್‌ ಅಪರಾಧಗಳಾಗಿವೆ. ಹಗರಣ ಸಂಬಂಧದ ಎಫ್‌ಐಆರ್‌ ಮತ್ತು ಆರೋಪ ಪಟ್ಟಿಗಳನ್ನು ಪರಿಶೀಲಿಸಿದ್ದು, ಪಿಎಂಎಲ್‌ಎ ಕಾಯಿದೆ ಸೆಕ್ಷನ್‌ 3ರ ಅಡಿ ಮೇಲ್ನೋಟಕ್ಕೆ ಅಕ್ರಮ ಹಣ ವರ್ಗಾವಣೆಯಾಗಿದ್ದು, ಸೆಕ್ಷನ್‌ 4ರ ಅಡಿ ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ ಆಗಸ್ಟ್‌ 8ರಂದು ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದೆ ಎಂದು ಜಾರಿ ನಿರ್ದೇಶನಾಲಯದ ಮನವಿಯಲ್ಲಿ ವಿವರಿಸಲಾಗಿದೆ.

ಪಿಎಸ್‌ಐ ಪರೀಕ್ಷೆಯಲ್ಲಿ ಆಯ್ಕೆ ಬಯಸಿದ್ದ ಕೆಲವು ಅಭ್ಯರ್ಥಿಗಳು ಅಕ್ರಮ ಮಾರ್ಗ ಹಿಡಿದಿದ್ದು, ವಿವಿಧ ಪೊಲೀಸ್‌ ಠಾಣೆಗಳಲ್ಲಿ ಅಭ್ಯರ್ಥಿಗಳು ಹಾಗೂ ಪೊಲೀಸ್‌ ನೇಮಕಾತಿ ವಿಭಾಗದ ಪ್ರಮುಖರ ವಿರುದ್ಧ ಎಂಟು ಎಫ್‌ಐಆರ್‌ಗಳು ದಾಖಲಾಗಿವೆ. 80ಕ್ಕೂ ಹೆಚ್ಚು ಮಂದಿ ಬಂಧನವಾಗಿದ್ದು, ಮೂರು ಆರೋಪ ಪಟ್ಟಿಗಳನ್ನು ಭಿನ್ನ ನ್ಯಾಯಾಲಯಗಳಿಗೆ ಸಲ್ಲಿಸಲಾಗಿದೆ. ಇಡೀ ಪ್ರಕರಣದ ಬಗ್ಗೆ ತನಗೆ ಮಾಹಿತಿ ಇದೆ ಎಂದು ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಶೈಲೇಂದ್ರ ಕುಮಾರ್‌ ಚೌಬೆ ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಲಾಗಿದೆ.

ಆರೋಪಿಗಳ ಹೇಳಿಕೆ ಏಕೆ?

ಪೊಲೀಸ್‌ ನೇಮಕಾತಿ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಡಿ ಹರ್ಷ 29ನೇ ಆರೋಪಿಯಾಗಿದ್ದಾನೆ. ಈತ ಅಭ್ಯರ್ಥಿಗಳು ಮತ್ತು ನೇಮಕಾತಿ ವಿಭಾಗದ ಅಧಿಕಾರಿಗಳ ನಡುವೆ ಸಂಪರ್ಕ ಸೇತುವೆಯಾಗಿದ್ದ. ಅಭ್ಯರ್ಥಿಗಳಿಂದ ಅಪಾರ ಪ್ರಮಾಣದ ಹಣವನ್ನು 29ನೇ ಆರೋಪಿಯಾದ ಹರ್ಷ ಸಂಗ್ರಹಿಸಿದ್ದಾನೆ. 30ನೇ ಆರೋಪಿಯಾಗಿರುವ ಆರ್‌ ಮಂಜುನಾಥ್‌ ಚಿಕ್ಕಮಂಗಳೂರಿನ ಡಿಪಿಒದಲ್ಲಿ ಸೆಕ್ಷನ್‌ ಮೇಲ್ವಿಚಾರಕನಾಗಿದ್ದು, ಹರ್ಷನ ಜೊತೆ ಸಂಪರ್ಕ ಹೊಂದಿದ್ದನು. 11ನೇ ಆರೋಪಿಯಾಗಿರುವ ಪಿಎಸ್‌ಐ ಆಕಾಂಕ್ಷಿ ಎಚ್‌ ಯಶವಂತಗೌಡ ಮತ್ತು ಅವರ ತಂದೆ ಹನುಮಂತಪ್ಪ ಅವರ ಜೊತೆ ಸಂಪರ್ಕ ಹೊಂದಿದ್ದನು. ಯಶವಂತಗೌಡ ₹45 ಲಕ್ಷ ಹಣವನ್ನು ಹರ್ಷನಿಗೆ ನೀಡಿದ್ದ.

ಪೊಲೀಸ್‌ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರ (ಎಡಿಜಿಪಿ) ನಂತರದ ಸ್ಥಾನದಲ್ಲಿದ್ದ ಕೆಎಸ್‌ಆರ್‌ಪಿ ವಿಭಾಗದ ಡಿವೈಎಸ್‌ಪಿ ಶಾಂತಕುಮಾರ್‌, ಹರ್ಷ, 25ನೇ ಆರೋಪಿ ಟಿ ಸಿ ಶ್ರೀನಿವಾಸ, 28ನೇ ಆರೋಪಿ ಎಚ್‌ ಶ್ರೀಧರ್‌, 35ನೇ ಆರೋಪಿ, ಅಮಾನತುಗೊಂಡಿರುವ ಎಡಿಜಿಪಿ ಅಮೃತ್‌ ಪೌಲ್‌ ಅವರ ಜೊತೆ ಪಿತೂರಿ ನಡೆಸಿದ್ದಾರೆ. ಅಕ್ರಮವಾಗಿ ಮಧ್ಯವರ್ತಿಗಳಿಂದ ಸಂಗ್ರಹಿಸಿದ ಹಣವನ್ನು ಶಾಂತಕುಮಾರ್‌ ಪಡೆದಿದ್ದು, ಅಭ್ಯರ್ಥಿಗಳ ಓಎಂಆರ್‌ ಶೀಟ್‌ ತಿರುಚಿರುವುದು, ಸಿಸಿಟಿವಿ ಆಫ್‌ ಮಾಡಿರುವುದು, ಬ್ಯಾಕ್‌ಅಪ್‌ ತೆರವು, ಓಎಂಆರ್‌ ಕಿಟ್‌ ಬಾಕ್ಸ್‌ಗಳಿಗೆ ಅಳವಡಿಸಲಾಗಿದ್ದ ಕೀಗಳ ನಾಶವನ್ನು ಪಡಿಸಿರುವ ಆರೋಪಗಳಿವೆ.

ಒಂದನೇ ಆರೋಪಿಯಾಗಿರುವ ಜಾಗೃತ್‌, ಹರ್ಷ ಮತ್ತು ಸ್ನೇಹಿತ ಪಿಎಸ್‌ಐ ಶರೀಫ್‌ ಕಾಖಿಮಣಿ ಅವರ ನೆರವಿನಿಂದ ಪಿಎಸ್‌ಐ ಆಗಿ ನೇಮಕವಾಗಲು ₹40 ಲಕ್ಷ ನಿಗದಿಪಡಿಸಿ, ಮುಂಗಡವಾಗಿ ₹15 ಲಕ್ಷ ಪಾವತಿಸಿದ್ದಾನೆ. ನೆಲಮಂಗಲದಲ್ಲಿ ಚಿಟ್‌ ಫಂಡ್‌ ನಡೆಸುತ್ತಿದ್ದ 27ನೇ ಆರೋಪಿಯಾಗಿರುವ ಶರತ್‌ ಕುಮಾರ್‌ ಎಂಬಾತ ಮಧ್ಯವರ್ತಿ ಚಂದ್ರಶೇಖರ್‌, 23ನೇ ಆರೋಪಿ ಕೇಶವಮೂರ್ತಿ, 24ನೇ ಆರೋಪಿ ಸಿ ಎನ್‌ ಶ್ರೀಧರ್‌ ಜೊತೆಗೂಡಿ ಪಿಎಸ್‌ಐ ಕೆಲಸ ಕೊಡಿಸುವ ಭರವಸೆಯ ಮೇಲೆ ಆರನೇ ಆರೋಪಿಯಾಗಿರುವ ಅಭ್ಯರ್ಥಿ ವೆಂಕಟೇಶ್‌ ಗೌಡನಿಂದ ₹50 ಲಕ್ಷ ಸಂಗ್ರಹಿಸಿದ್ದರು. ಇದನ್ನು ಹರ್ಷನಿಗೆ ನೀಡಲಾಗಿ, ₹50 ಲಕ್ಷ ಪೈಕಿ ₹30 ಲಕ್ಷವನ್ನು ಚಿಟ್‌ ಫಂಡ್‌ನಲ್ಲಿ ಹೂಡಿಕೆ ಮಾಡಲು ಶರತ್‌ಕುಮಾರ್‌ಗೆ ಹರ್ಷ ನೀಡಿದ್ದನು. ವೆಂಕಟೇಶ್‌ ಗೌಡನಿಂದ ಪಡೆದ ಹಣವನ್ನು ಅಕ್ರಮ ಹಣ ಮಾಡಲು ಬಳಸಿದ ಆರೋಪವಿದೆ. ಹೀಗಾಗಿ ಅವರ ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿಸಬೇಕು ಎಂದು ಕೋರಲಾಗಿದೆ.

ಹಿಂದಿನ ಲೇಖನಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ: ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ ಅಮಾನತು
ಮುಂದಿನ ಲೇಖನಮಂಗಳೂರು: ವಿದ್ಯಾರ್ಥಿನಿಲಯದಿಂದ ಮೂವರು ವಿದ್ಯಾರ್ಥಿನಿಯರು ನಾಪತ್ತೆ