ಮನೆ ಕಾನೂನು ಕಪ್ಪುಹಣ ಕಾಯಿದೆಯ ಪೂರ್ವಾನ್ವಯಕ್ಕೆ ಆಸ್ಪದವಿಲ್ಲ: ಅನಿಲ್ ಅಂಬಾನಿ ಮನವಿ ಸಂಬಂಧ ಎಜಿಗೆ ಬಾಂಬೆ ಹೈಕೋರ್ಟ್ ನೋಟಿಸ್

ಕಪ್ಪುಹಣ ಕಾಯಿದೆಯ ಪೂರ್ವಾನ್ವಯಕ್ಕೆ ಆಸ್ಪದವಿಲ್ಲ: ಅನಿಲ್ ಅಂಬಾನಿ ಮನವಿ ಸಂಬಂಧ ಎಜಿಗೆ ಬಾಂಬೆ ಹೈಕೋರ್ಟ್ ನೋಟಿಸ್

0

ರಿಲಯನ್ಸ್ (ಎಡಿಎ) ಗ್ರೂಪ್’ನ ಅಧ್ಯಕ್ಷ ಅನಿಲ್ ಅಂಬಾನಿ ಅವರ ವಿರುದ್ಧ ಕಪ್ಪುಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿ) ಹಾಗೂ 2015ರ ತೆರಿಗೆ ಕಾಯಿದೆಯಡಿ ವಿಚಾರಣೆ ನಡೆಸುವಾಗ ಕಾಯಿದೆಯನ್ನು ಪೂರ್ವಾನ್ವಯ ಮಾಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಸೋಮವಾರ ಆದಾಯ ತೆರಿಗೆ ಇಲಾಖೆಗೆ ತಾಕೀತು ಮಾಡಿದೆ.

ಕಾಯಿದೆ 2015ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಅದಕ್ಕೂ10 ವರ್ಷ ಹಿಂದಿನ ಅವಧಿಯ ವಹಿವಾಟನ್ನು ಕಾಯಿದೆಯಡಿ ತಂದಿದ್ದಾರೆ ಎಂದು ತಿಳಿಸಿದ್ದ ಅನಿಲ್ ಅಂಬಾನಿ ತಮ್ಮ ವಿರುದ್ಧದ ತನಿಖೆಯನ್ನು ಪ್ರಶ್ನಿಸಿದ್ದರು.

ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಇರುವ ₹814 ಕೋಟಿಗೂ ಹೆಚ್ಚು ಮೌಲ್ಯದ ಬಹಿರಂಗಪಡಿಸದ ಹಣಕ್ಕೆ ಸಂಬಂಧಿಸಿದಂತೆ ₹420 ಕೋಟಿ ತೆರಿಗೆ ವಂಚನೆ ಮಾಡಿದ ಆರೋಪದಡಿ ಆದಾಯ ತೆರಿಗೆ ಇಲಾಖೆ ಅನಿಲ್ ಅಂಬಾನಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಅಂಬಾನಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಒಬ್ಬ ವ್ಯಕ್ತಿಯ ನಡವಳಿಕೆಯನ್ನು ಪೂರ್ವಾನ್ವಯವಾಗುವ ರೀತಿಯಲ್ಲಿ ಅಪರಾಧೀಕರಿಸುವುದು ಹೇಗೆ ಸಾಧ್ಯ ಎಂದು ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ಎಸ್ ಜಿ ಡಿಗೆ ಅವರಿದ್ದ ವಿಭಾಗೀಯ ಪೀಠ ಪ್ರಶ್ನಿಸಿತು.

ಕಾಯಿದೆ ಜಾರಿಗೆ ಬಂದ ನಂತರದ ಅಪರಾಧಗಳಿಗೆ ಆದಾಯ ತೆರಿಗೆ ಇಲಾಖೆ ಕಾಯಿದೆ ಅನ್ವಯಿಸಬಹುದು. ಜೊತೆಗೆ ಅವುಗಳನ್ನು ಅಪರಾಧೀಕರಿಸಬಹುದು. ಆದರೆ ಕಾಲಾವಧಿಯನ್ನು ನಿರ್ದಿಷ್ಟಪಡಿಸುವುದು ಪ್ರಸ್ತುತವಾಗಿರಬೇಕು ಎಂದಿತು.

ತಮಗೆ ನೀಡಿದ್ದ ನೋಟಿಸ್ ಮಾತ್ರವಲ್ಲದೆ ಪೂರ್ವಾನ್ವಯಕ್ಕೆ ಅವಕಾಶ ನೀಡಿದ ಆಧಾರದ ಮೇಲೆ  ಕಪ್ಪುಹಣ ಕಾಯಿದೆಯ ನಿಯಮಾವಳಿಗಳ ಸಾಂವಿಧಾನಿಕ ಸಿಂಧುತ್ವವನ್ನೂ ಅನಿಲ್ ಅಂಬಾನಿ ಅವರು ಪ್ರಶ್ನಿಸಿದ್ದರು.

ಕೇಂದ್ರ ಸರ್ಕಾರದ ಕಾಯಿದೆಯ ದೋಷಗಳನ್ನು ಪ್ರಶ್ನಿಸಿರುವ ಕಾರಣ ನ್ಯಾಯಾಲಯ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ನೋಟಿಸ್ ಜಾರಿಗೊಳಿಸಿ ಪ್ರಕರಣವನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ. ಜೊತೆಗೆ ಅನಿಲ್ ಅಂಬಾನಿ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಹೈಕೋರ್ಟ್’ನ ಸಮನ್ವಯ ಪೀಠ ಐಟಿ ಇಲಾಖೆಗೆ ನೀಡಿದ್ದ ಆದೇಶವನ್ನೂ ಫೆ. 20ರವರೆಗೆ ವಿಸ್ತರಿಸಲಾಗಿದೆ.

ಹಿಂದಿನ ಲೇಖನಮಂಡ್ಯ: ಒಂಟಿ ಮಹಿಳೆಗೆ ಬೆಂಕಿ ಹಚ್ಚಿ ಕೊಲೆ
ಮುಂದಿನ ಲೇಖನಖುಷಿ ಖುಷಿಯಾಗಿರಲು ಏನು ಮಾಡಬೇಕು?