ಮನೆ ಮನರಂಜನೆ ‘ಭೈರತಿ’ ಅಖಾಡಕ್ಕೆ ಶಿವಣ್ಣ: ನರ್ತನ್ ಚಿತ್ರಕ್ಕೆ ಇಂದು ಮುಹೂರ್ತ

‘ಭೈರತಿ’ ಅಖಾಡಕ್ಕೆ ಶಿವಣ್ಣ: ನರ್ತನ್ ಚಿತ್ರಕ್ಕೆ ಇಂದು ಮುಹೂರ್ತ

0

 “ಭೈರತಿ ರಣಗಲ್‌’- ಶಿವರಾಜ್‌ಕುಮಾರ್‌ ನಟನೆಯ “ಮಫ್ತಿ’ ಸಿನಿಮಾದಲ್ಲಿನ ಈ ಪಾತ್ರ ಎಲ್ಲರಿಗೂ ಇಷ್ಟವಾಗಿತ್ತು. ಇದರ ಜೊತೆಗೆ ಆ ಪಾತ್ರದ ಹೆಸರು ಕೂಡಾ ಗಮನ ಸೆಳೆದಿತ್ತು. ಮುಂದೊಂದು ದಿನ ಈ ಟೈಟಲ್‌ ಉಪಯೋಗಕ್ಕೆ ಬರುತ್ತದೆ ಎಂಬ ದೃಷ್ಟಿಯಿಂದಲೇ ಶಿವಣ್ಣ ಅಂದೇ ಆ ಟೈಟಲ್‌ ಅನ್ನು ರಿಜಿಸ್ಟರ್‌ ಮಾಡಿಸಿಟ್ಟಿದ್ದರು. ಅಂದುಕೊಂಡಂತೆಯೇ ಎಲ್ಲವೂ ಆಗಿದೆ. ಶಿವರಾಜ್‌ಕುಮಾರ್‌ ಈಗ “ಭೈರತಿ ರಣಗಲ್‌’ ಚಿತ್ರದಲ್ಲಿ ನಟಿಸಲು ಅಣಿಯಾಗಿದ್ದಾರೆ.

Join Our Whatsapp Group

 “ಮಫ್ತಿ’ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ನರ್ತನ್‌ ಈಗ ಮತ್ತೆ “ಭೈರತಿ ರಣಗಲ್‌’ ಮಾಡಲು ಮುಂದಾಗಿದ್ದಾರೆ. ಇಂದು ಚಿತ್ರದ ಮುಹೂರ್ತ ನಡೆಯಲಿದೆ. ಜೂನ್‌ 10ರಿಂದ ಚಿತ್ರೀಕರಣ ಆರಂಭವಾಗಲಿದೆ.

 “ವೇದ’ ಸಿನಿಮಾ ಮೂಲಕ ನಿರ್ಮಾಣಕ್ಕಿಳಿ ದಿರುವ ಶಿವಣ್ಣ ಈಗ “ಭೈರತಿ ರಣಗಲ್‌’ ಚಿತ್ರವನ್ನೂ ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. “ಗೀತಾ ಪಿಕ್ಚರ್ಸ್‌’ನಡಿ ಗೀತಾ ಶಿವರಾಜ್‌ ಕುಮಾರ್‌ “ಭೈರತಿ ರಣಗಲ್‌’ ಚತ್ರವನ್ನು ನಿರ್ಮಿಸುತ್ತಿದ್ದಾರೆ. ಮೊದಲ ಚಿತ್ರ “ವೇದ’ 50 ದಿನ ಪೂರೈಸುವ ಮೂಲಕ ಶಿವರಾಜ್‌ಕುಮಾರ್‌ ಅವರಿಗೆ ಗೆಲುವು ತಂದುಕೊಟ್ಟಿದೆ.

ಥಿಯೇಟರ್‌ ಕಲೆಕ್ಷನ್‌ ಜೊತೆಗೆ ಓಟಿಟಿಯಲ್ಲೂ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದ ಒಟ್ಟು ಬಿಝಿನೆಸ್‌ ವಿಷಯದಲ್ಲೂ “ವೇದ’ ಶಿವರಾಜ್‌ಕುಮಾರ್‌ ಅವರಿಗೆ ಖುಷಿ ಕೊಟ್ಟ ಸಿನಿಮಾ. ಅದೇ ಖುಷಿಯಲ್ಲಿ ಈಗ ಎರಡನೇ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಕನ್ನಡದ ಮುಖ್ಯವಾಹಿನಿಯ ಸ್ಟಾರ್‌ಗಳು ಈಗ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮಿಂಚಲು ಅಣಿಯಾಗಿದ್ದಾರೆ. ಈಗಾಗಲೇ ಯಶ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಗಟ್ಟಿ ನೆಲೆ ಕಂಡುಕೊಂಡಿದ್ದಾರೆ. ಅದರ ಬೆನ್ನಿಗೆ ರಕ್ಷಿತ್‌ ಶೆಟ್ಟಿ, ರಿಷಭ್‌ ಶೆಟ್ಟಿ ಕೂಡಾ ದೇಶಕ್ಕೆ ತಮ್ಮ ಮುಖಪರಿಚಯ ಮಾಡಿಕೊಂಡಿದ್ದಾರೆ. ಈಗ ನಟ ಶಿವರಾಜ್‌ಕುಮಾರ್‌ ಅವರ ಚಿತ್ರಗಳು ಕೂಡಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಈಗಾಗಲೇ “ವೇದ’ ಚಿತ್ರ ತೆಲುಗಿನಲ್ಲೂ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಈಗ ಅವರ “ಭೈರತಿ ರಣಗಲ್‌’ ಚಿತ್ರ ಕೂಡಾ ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲೂ ನಿರ್ಮಾಣವಾಗುತ್ತಿದೆ.

ಇನ್ನು, ಶಿವಣ್ಣ, ರಜನಿಕಾಂತ್‌ “ಜೈಲರ್‌’ ಚಿತ್ರದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ “ಜೈಲರ್‌’ ಚಿತ್ರೀಕರಣವನ್ನು ಮುಗಿಸಿಕೊಂಡಿದ್ದಾರೆ. ಇದರ ಜೊತೆಗೆ ತಮಿಳಿನ ಧನುಶ್‌ ನಟನೆಯ ಚಿತ್ರವೊಂದರಲ್ಲೂ ಶಿವರಾಜ್‌ ಕುಮಾರ್‌ ನಟಿಸುತ್ತಿದ್ದು, ಬಾಲಯ್ಯ ಅವರ ಹೊಸ ಚಿತ್ರದಲ್ಲೂ ಶಿವಣ್ಣ ನಟಿಸಲಿದ್ದಾರೆಂಬ ಸುದ್ದಿ ಕೇಳಿಬರುತ್ತಿದೆ. ಈ ಮೂಲಕ ಕನ್ನಡದ ಜೊತೆ ತೆಲುಗು, ತಮಿಳು ಸಿನಿಮಾಗಳಲ್ಲೂ ಶಿವಣ್ಣ ಬಿಝಿಯಾಗುತ್ತಿದ್ದಾರೆ. ಸದ್ಯ ಕನ್ನಡದಲ್ಲಿ “ಘೋಸ್ಟ್‌”, “ಕರಟಕ ಧಮನಕ’, “45′ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.

ಹಿಂದಿನ ಲೇಖನಹೆಂಡತಿಯ ಅನೈತಿಕ ಸಂಬಂಧ: ಮನನೊಂದ ಗಂಡ ಆತ್ಮಹತ್ಯೆಗೆ ಶರಣು
ಮುಂದಿನ ಲೇಖನಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಬಲಿಯಾದ ಯುವಕ