ಬೆಳಗಾವಿ (ಮೇ 23): ಆಯಿಲ್ ಟ್ಯಾಂಕರ್ನಲ್ಲಿ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಬೆಳಗಾವಿ ಜಿಲ್ಲೆಯ ಅಬಕಾರಿ ಅಧಿಕಾರಿಗಳು ಭೇದಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದ ಬಳಿ ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ 14 ಸಾವಿರ ಲೀಟರ್ ಸ್ಪಿರಿಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಅಕ್ರಮ ದಂಧೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿ, ಟ್ಯಾಂಕರ್ ಅನ್ನು ಜಪ್ತಿ ಮಾಡಲಾಗಿದ್ದು ಬಂಧಿತ ಗ್ಯಾಂಗ್ ಅಧಿಕಾರಿಗಳನ್ನು ಡೈವರ್ಟ್ ಮಾಡಲು ಅತ್ಯಂತ ಚಾಣಾಕ್ಷ ತಂತ್ರ ರೂಪಿಸಿತ್ತು. ಟ್ಯಾಂಕರ್ನ ಮೂರು ಭಾಗಗಳಲ್ಲಿ ಸಣ್ಣ ಸಣ್ಣ ಪೈಪ್ಗಳನ್ನು ಅಳವಡಿಸಿ, ಅದರಲ್ಲಿ ಮಾತ್ರ ಆಯಿಲ್ ತುಂಬಿಸಲಾಗಿತ್ತು. ಅಧಿಕಾರಿಗಳು ತಪಾಸಣೆ ನಡೆಸುವಾಗ ಕೇವಲ ಆ ಪೈಪ್ಗಳಲ್ಲಿದ್ದ ಆಯಿಲ್ ತೋರಿಸಿ ಇದು ಆಯಿಲ್ ಟ್ಯಾಂಕರ್ ಎಂದು ನಂಬಿಸಿ ನುಣುಚಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಆದರೆ ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಖಾನಾಪುರ ಅಬಕಾರಿ ಅಧಿಕಾರಿಗಳಿಗೆ ತಪಾಸಣೆ ವೇಳೆ ತೀವ್ರ ಸಂಶಯ ಮೂಡಿದೆ. ತಕ್ಷಣವೇ ಟ್ಯಾಂಕರ್ನಲ್ಲಿದ್ದ ಆಯಿಲ್ ಪೈಪ್ಗಳನ್ನು ಹೊರತೆಗೆದು ಆಳವಾಗಿ ಪರಿಶೀಲಿಸಿದಾಗ, ಅದರ ಸುತ್ತಲೂ ಸಾವಿರಾರು ಲೀಟರ್ ಸ್ಪಿರಿಟ್ ತುಂಬಿಟ್ಟಿರುವುದು ಪತ್ತೆಯಾಗಿದ್ದು, ಅಧಿಕಾರಿಗಳೇ ಒಂದು ಕ್ಷಣ ಶಾಕ್ ಆಗಿದ್ದಾರೆ. ಸಾಮಾನ್ಯವಾಗಿ ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸರಬರಾಜಾಗುವ ಪ್ರಕರಣಗಳು ಹೆಚ್ಚಿರುತ್ತವೆ. ಆದರೆ, ಈ ಕತರ್ನಾಕ್ ಗ್ಯಾಂಗ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಿಂದ ಗೋವಾಕ್ಕೆ ಈ ಸ್ಪಿರಿಟ್ ಅನ್ನು ಅಕ್ರಮವಾಗಿ ಸಾಗಿಸುತ್ತಿತ್ತು ಎನ್ನಲಾಗಿದೆ. ಸದ್ಯಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ಇಡೀ ಜಾಲವನ್ನು ಪತ್ತೆ ಹಚ್ಚಿದ್ದು, ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಅಕ್ರಮ ದಂಧೆಯ ಹಿಂದೆ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ ಮತ್ತು ಇದರ ಅಸಲಿ ಕಿಂಗ್ಪಿನ್ ಯಾರು ಎಂಬ ಕುರಿತು ತನಿಖೆ ಮುಂದುವರಿದಿದೆ ಎಂದು ತಿಳಿದುಬಂದಿದೆ.


















