ಮನೆ ರಾಜಕೀಯ ನನ್ನ ಮಗನ ಸಾವಿನ ಹಿಂದೆ ಕಾಣದ ಕೈಗಳಿವೆ: ಶಾಸಕ ಎಂ ಪಿ ರೇಣುಕಾಚಾರ್ಯ

ನನ್ನ ಮಗನ ಸಾವಿನ ಹಿಂದೆ ಕಾಣದ ಕೈಗಳಿವೆ: ಶಾಸಕ ಎಂ ಪಿ ರೇಣುಕಾಚಾರ್ಯ

0

ದಾವಣಗೆರೆ(Davanagere): ನನ್ನ ಮಗನ ಸಾವಿನ ಹಿಂದೆ ಕಾಣದ ಕೈಗಳಿವೆ. ಇದು ಬಹಳ ನೋವಿನ ಸಂಗತಿ. ಈ ಅಧಿಕಾರ, ರಾಜಕೀಯ ಏನೂ ಬೇಡ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಸಹೋದರನ ಮಗನ ಸಾವಿಗೆ ಮಮ್ಮಲ ಮರುಗಿದರು.‌

ದಾವಣಗೆರೆ ಜಿಲ್ಲೆಯ ಹೊನ್ನಾಳಿ ನಿವಾಸದ ಬಳಿ ಮಾತನಾಡಿದ ಅವರು, ಆ ದೇವರು ನನ್ನನ್ನಾದ್ರೂ ಬಲಿ ಪಡೆಯಲ್ಲಿವೇ?, ಅವನು ಏನ್​ ಅನ್ಯಾಯ ಮಾಡಿದ್ದ?, ಕೈಲಾದ ಮಟ್ಟಿಗೆ ದಾನ-ಧರ್ಮ ಮಾಡುತ್ತಿದ್ದ ಚಂದ್ರುಗೆ ಇಂತಹ ಸ್ಥಿತಿ ಏಕೆ ? ಎಂದು ಕಣ್ಣೀರು ಹಾಕಿದರು.

ಇದು ಸಹಜ ಸಾವಲ್ಲ, ಅಪಘಾತವು ಅಲ್ಲ:  ನನ್ನ ಮಗ ಚಂದ್ರು ಕಾರಿನ ಹಿಂಭಾಗ ಮಲಗಿದ್ದಾನೆ. ವ್ಯವಸ್ಥಿತವಾಗಿ ಕಾರನ್ನು ಕಾಲುವೆಗೆ ತಳ್ಳಿದ್ದಾರೆ. ಇದು ಸಹಜ ಸಾವೋ ಇಲ್ಲ ಅಪಘಾತವೋ ಎಂಬುವುದನ್ನು ನೀವೇ ತೀರ್ಮಾನ ಮಾಡಿ. ಕಾರು ಚಾಲನೆ ಮಾಡುತ್ತಿದ್ದ ಚಂದ್ರು ಮುಂದಿನ‌ ಸೀಟ್​​ನಲ್ಲಿರಬೇಕಿತ್ತು. ಆದರೆ ಹಿಂಬದಿ ಸೀಟ್​​ನಲ್ಲಿ ಮಲಗಿದ್ದಾನೆ. ಹಾಗಾಗಿ, ಇದು ಸಹಜ ಸಾವಲ್ಲ, ಅಪಘಾತವೂ ಅಲ್ಲ. ನಾನು ಈಗಾಗಲೇ ಇದು ಕಿಡ್ನ್ಯಾಪ್ ಎಂದು ಖಚಿತವಾಗಿ ಹೇಳಿದ್ದೆ. ಯಾರನ್ನೂ ಆರೋಪಿ ಸ್ಥಾನದಲ್ಲಿ ನಿಲ್ಲಿಸಲ್ಲ. ಅವನ ಕಾರನ್ನು ಸ್ವಿಫ್ಟ್ ಡಿಸೈರ್‌ ಹಾಗೂ ಓಮಿನಿ ಎರಡು ಕಾರು ಫಾಲೋ ಮಾಡಿದೆ. ಅವರೇ ವ್ಯವಸ್ಥಿತವಾಗಿ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

ಚಂದ್ರು ಕುಟುಂಬಸ್ಥರ ದೂರಿನ ಆಧಾರದ ಮೇಲೆ ತನಿಖೆ:

ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಎಸ್​ಪಿ ಸಿ.ಬಿ ರಿಷ್ಯಂತ್,  “ಕಾಣೆಯಾಗಿದ್ದ ಚಂದ್ರಶೇಖರ್ ಎಂಬ ಯುವಕ ಕಾರು ಸಮೇತ ಶವವಾಗಿ ಪತ್ತೆಯಾಗಿದ್ದಾನೆ. ಈಗಾಗಲೇ ಫಾರೆನ್ಸಿಕ್ ಟೀಂ ಆಗಮಿಸಿ ಪರಿಶೀಲನೆ ನಡೆಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಹೆಚ್ಚಿನ ತನಿಖೆ ನಡೆಸಲು ಮೃತ ದೇಹವನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ತುಂಗಾ ಕಾಲುವೆಯಲ್ಲಿ ಕಾರಿನ ಮೇಲಿನ ಭಾಗ ಕಾಣಿಸುತ್ತಿತ್ತು. ಆಗ ಈಜುಗಾರರನ್ನು ನೀರಿಗಿಳಿಸಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಚಂದ್ರು ಕುಟುಂಬಸ್ಥರು ಯಾವ ರೀತಿಯ ದೂರು ದಾಖಲು ಮಾಡ್ತಾರೋ ಅದನ್ನು ನೋಡಿಕೊಂಡು ಎಲ್ಲಾ ಕಡೆಯಿಂದ ತನಿಖೆ ಮಾಡುತ್ತೇವೆ” ಎಂದು ತಿಳಿಸಿದರು.

ಎಲ್ಲಾ ಆಯಾಮಗಳಲ್ಲಿ ತನಿಖೆ

ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ತಮ್ಮನ ಮಗನ ಸಾವಿನ ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ರೇಣುಕಾಚಾರ್ಯ ತಮ್ಮನ ಮಗನ ಕಾರು ನಾಲೆಯಲ್ಲಿ ಸಿಕ್ಕಿದೆ. ಆ ಕಾರಿನಲ್ಲಿ ಅವರ ಶವ ಪತ್ತೆಯಾಗಿದೆ. ಅಲ್ಲಿಂದ ಇನ್ನೂ ವರದಿ ಬರಬೇಕಿದೆ. ಇಲಾಖೆಗೆ ಈ‌ ಬಗ್ಗೆ ಸದ್ಯ ಯಾವುದೇ ಅನುಮಾನ ಇಲ್ಲ. ತನಿಖೆಯಿಂದ ಸತ್ಯ ಹೊರ‌ ಬರಬೇಕಾಗಿದೆ. ಏನಾಗಿದೆ, ಹೇಗೆ ಆಗಿದೆ ಎಂಬುದು ಕೆಲವೇ ಹೊತ್ತಿನಲ್ಲಿ ಗೊತ್ತಾಗಲಿದೆ ಎಂದರು.

ಹಿಂದಿನ ಲೇಖನನವೋದಯ: ಬೋಧಕ, ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಮಧ್ಯಪ್ರದೇಶದಲ್ಲಿ ಬಸ್- ಕಾರಿನ ನಡುವೆ ಡಿಕ್ಕಿ: 11 ಮಂದಿ ದುರ್ಮರಣ