ಮಂಗಳೂರು : ಧರ್ಮಸ್ಥಳದಲ್ಲಿ ನೂರಾರು ಅಪರಿಚಿತ ಹೆಣ ಹೂಳಲಾಗಿದೆ ಎಂಬ ಆರೋಪ ಪ್ರಕರಣದ ಪ್ರಮುಖ ರೂವಾರಿಗಳಲ್ಲೊಬ್ಬರಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ‘ಬುರುಡೆ ಗ್ಯಾಂಗ್’ ಹೆಸರಿನ ಯಕ್ಷಗಾನ ಪ್ರಸಂಗ ಸಂಬಂಧ ಯಕ್ಷಗಾನ ಕಲಾವಿದರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬೆದರಿಕೆ ಹಾಕಿರುವ ಆರೋಪ ತಿಮರೋಡಿ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಪುತ್ತೂರು ಮಹಿಳಾ ಠಾಣೆ ಮತ್ತು ಗ್ರಾಮಾಂತ್ರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಧರ್ಮಸ್ಥಳ ಪ್ರಕರಣವನ್ನೇ ಹೋಲುವು ಕಥೆ ಹೊಂದಿರುವ ‘ಬುರುಡೆ ಗ್ಯಾಂಗ್’ ಹೆಸರಿನ ಯಕ್ಷಗಾನ ಪ್ರಸಂಗ ನಿರ್ಮಾಣ ಮಾಡಲಾಗಿತ್ತು.ಇದರಿಂದ ರೊಚ್ಚಿಗೆದ್ದ ಮಹೇಶ್ ಶೆಟ್ಟಿ ತಿಮರೋಡಿ ಏಪ್ರಿಲ್ 11ರಂದು ಯಕ್ಷಗಾನ ಹಾಸ್ಯ ಕಲಾವಿಧ ಪ್ರಜ್ವಲ್ ಗುರುನಾಯನಕೆರೆಗೆ ಕರೆ ಮಾಡಿದ್ದರು. ಈ ವೇಳೆ ಕಲಾವಿದ ದಿನೇಶ್ ಶೆಟ್ಟಿಗಾರ್ ಮತ್ತು ಚಿತ್ರನಟ ಮಂದಾರ ಸುಂದರ ರೈ ಅವರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಲ್ಲದೆ, ಅವರ ತಾಯಂದಿರ ಚಾರಿತ್ರ್ಯದ ಬಗ್ಗೆಯೂ ತೀರಾ ಕೆಟ್ಟದಾಗಿ ಮಾತನಾಡಿದ್ದರು.
ಆ ಆಡಿಯೋವನ್ನು ದಿನೇಶ್ ಶೆಟ್ಟಿ ಮತ್ತು ಸುಂದರ ರೈಗೆ ಪ್ರಜ್ವಲ್ ಕಳುಹಿಸಿದ್ದು, ಅದನ್ನು ಕೇಳಿ ಕಲಾವಿದರು ತೀವ್ರ ನೊಂದಿದ್ದಾರೆ. ಈ ಹಿನ್ನೆಲೆ ಸುಂದರ ರೈ ನೀಡಿದ ದೂರಿನಡಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ತಿಮರೋಡಿ ವಿರುದ್ಧ FIR ದಾಖಲಾಗಿದ್ದರೆ, ದಿನೇಶ್ ಶೆಟ್ಟಿಗಾರ್ ತಾಯಿ ಲೀಲಾವತಿ ಶೆಟ್ಟಿಗಾರ್ ದೂರಿನಡಿ ಮಹಿಳಾ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ತೀರಾ ಅಂದರೆ ಅತಿ ಕೆಟ್ಟದಾದ ಪದಗಳನ್ನು ಯಕ್ಷಗಾನ ಕಲಾವಿದರ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಬಳಸಿರೋದು ಆಡಿಯೋದಲ್ಲಿವೆ. ಒಂದು ಮಗುವಿಗೆ ಅನ್ಯಾಯ ಆಗಿರುವ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಇವರು ಅದನ್ನು ಹಾಸ್ಯ ಮಾಡುತ್ತಾರೆ. ಆ ಬಗ್ಗೆ ಕಥೆ ಬರೆಯುತ್ತಾರೆ. ಯಕ್ಷಗಾನ ಮಾಡಲಿ, ಹೊಟ್ಟೆಪಾಡಿಗೆ ಅದನ್ನು ಮಾಡುವುದು. ಆದರೆ ಈ ಕತೆ ಯಾಕೆ? ಅವರ ಕುಟುಂಬಸ್ಥರ ಕತೆಯನ್ನು ಮಾಡಬಹುದಿತ್ತು ಅಲ್ವಾ?.
ಈ ರೀತಿಯದ್ದನ್ನು ಮಾಡುವ ಮೊದಲು ಜಾಗೃತೆ ಇರಬೇಕಿತ್ತು. ಯಕ್ಷಗಾನಕ್ಕೆ ಒಂದು ಮರ್ಯಾದೆ ಇದೆ ಅಲ್ಲವಾ? ಎಂದು ಮಹೆಶ್ ಶೆಟ್ಟಿ ತಿಮರೋಡಿ ಪ್ರಶ್ನಿಸಿರೋದನ್ನು ಆಡಿಯೋದಲ್ಲಿ ಕೇಳಬಹುದಾಗಿದೆ. ಜೊತೆಗೆ ಈ ವಿಷಯವನ್ನು ಅವರಿಗೆ ಮುಟ್ಟಿಸು ಎಂದೂ ತಿಮರೋಡಿ ಹೇಳಿರುವ ಮಾತುಗಳನ್ನು ಗಮನಿಸಬಹುದಾಗಿದೆ.















