ಚೆನ್ನೈ : ಘಾಟ್‌ನಲ್ಲಿ ಟಿಟಿ ವಾಹನ ಪಲ್ಟಿಯಾಗಿ ಪ್ರವಾಸಕ್ಕೆ ಹೋಗಿದ್ದ ಒಂದೇ ಶಾಲೆಯ ಸಿಬ್ಬಂದಿ, ಶಿಕ್ಷಕರು ಸೇರಿ 9 ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವಾಲ್ಪರೈ ಬೆಟ್ಟದಲ್ಲಿ ನಡೆದಿದೆ.
ಮೃತರನ್ನು ಅಜಿತಾ (54), ರಾಮ್ಲಾ (52). ಸುಹ್ರಾ (43), ಆಶಾ (41), ಮಜೀರ್ (43), ಸಜಿತಾ (45), ಶಕೀಲಾ(37), ರುಕಿಯಾ (39) ಮತ್ತು ಹಿಶಾಮ್ (12) ಎಂದು ಗುರುತಿಸಲಾಗಿದೆ. ಮೃತರೆಲ್ಲರು ಕೇರಳದ (Kerala) ಮಲಪ್ಪುರಂ ಜಿಲ್ಲೆಯ ಪಾಂಗ್‌ನ ಪಲ್ಲಿಪರಂಬುವಿನ ಸರ್ಕಾರಿ ಎಲ್‌ಪಿ ಶಾಲೆಯ ಐವರು ಶಿಕ್ಷಕರು ಹಾಗೂ ಸಿಬ್ಬಂದಿ ಎನ್ನಲಾಗಿದೆ.
ಬೇಸಿಗೆ ರಜೆ ಹಿನ್ನೆಲೆ ಎಲ್ಲರೂ ಸೇರಿಕೊಂಡು ತಮಿಳುನಾಡಿನ ವಾಲ್ಪರೈ ಬೆಟ್ಟವನ್ನು ವೀಕ್ಷಿಸಲು ಹೋಗಿದ್ದರು. ಬೆಟ್ಟದಿಂದ ವಾಪಸ್ಸಾಗುವಾಗ ಸಂಜೆ 5ರ ಸುಮಾರಿಗೆ ಘಾಟ್‌ನಲ್ಲಿ ಈ ಅವಘಡ ಸಂಭವಿಸಿದೆ. ತಿರುವಿನಲ್ಲಿ ವಾಹನ ನಿಯಂತ್ರಣ ಕಳೆದುಕೊಂಡಿದ್ದು, ಟಿಟಿ ಪಲ್ಟಿಯಾಗಿ 13ನೇ ಹೇರ್ ಪಿನ್ ತಿರುವಿನಿಂದ 9ನೇ ತಿರುವಿಗೆ ಬಿದ್ದಿದ್ದು, ಪೀಸ್ ಪೀಸ್ ಆಗಿದೆ.
ವಾಹನ ಬಿದ್ದ, ರಭಸಕ್ಕೆ 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ವಾಹನ ಚಾಲಕ ಸೇರಿದಂತೆ ನಾಲ್ವರನ್ನು ಪೊಲ್ಲಾಚಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕಡಂಪರೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇಂದು ಮಲಪ್ಪುರಂ ಜಿಲ್ಲೆಯ ಅಂಬಲಪ್ಪರಂಬ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಂತಿಮ ದರ್ಶನಕ್ಕೀಡಲಾಗಿದ್ದು, ಅಂತ್ಯಕ್ರಿಯೆ ನಡೆಯಲಿದೆ. ನೆಚ್ಚಿನ ಶಿಕ್ಷಕರ ನೆನೆದು ವಿದ್ಯಾರ್ಥಿಗಳು, ಪೋಷಕರ ಕಣ್ಣೀರು ಹಾಕಿದ್ದಾರೆ.















