ಮನೆ ಸುದ್ದಿ ಜಾಲ ಮೊದಲು ಮತದಾನ, ಬಳಿಕ ಜಲಪಾನ; ಬಿಜೆಪಿಯ ‘ಮಾಸ್ಟರ್ ಪ್ಲಾನ್’ ವರ್ಕೌಟ್

ಮೊದಲು ಮತದಾನ, ಬಳಿಕ ಜಲಪಾನ; ಬಿಜೆಪಿಯ ‘ಮಾಸ್ಟರ್ ಪ್ಲಾನ್’ ವರ್ಕೌಟ್

0

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಚುನಾವಣಾ ರಾಜಕಾರಣದಲ್ಲಿ ಬಿಜೆಪಿ ಈ ಬಾರಿ ಅಚ್ಚರಿಯ ಫಲಿತಾಂಶ ನೀಡಲು ಕಮಲ ನಾಯಕರ ‘ಮೈಕ್ರೋ ಮ್ಯಾನೇಜ್‌ಮೆಂಟ್’ ಮತ್ತು ಸಮಯೋಚಿತ ತಂತ್ರಗಾರಿಕೆಗಳೇ ಮುಖ್ಯ ಕಾರಣ ಎನ್ನಲಾಗುತ್ತಿದೆ. ವಿರೋಧಿಗಳ ಕೋಟೆಯನ್ನು ಭೇದಿಸಲು ಬಿಜೆಪಿ ರೂಪಿಸಿದ್ದ “ಬೆಳ್ಳಂಬೆಳಗ್ಗೆ ಬೂತ್‌ಗೆ ನಡಿ” ಎಂಬ ಅಭಿಯಾನ ಈಗ ಭಾರಿ ಚರ್ಚೆಯಾಗುತ್ತಿದೆ

ಸಾಮಾನ್ಯವಾಗಿ ಜನರು ಮಧ್ಯಾಹ್ನದ ನಂತರ ನಿರಾಳವಾಗಿ ಮತದಾನ ಮಾಡಲು ಇಷ್ಟಪಡುತ್ತಾರೆ. ಆದರೆ ಬಂಗಾಳದ ಸೂಕ್ಷ್ಮ ಪರಿಸ್ಥಿತಿಯಲ್ಲಿ ಇದು ಬಿಜೆಪಿಗೆ ಮುಳುವಾಗುತ್ತಿತ್ತು. ಮತದಾರರು ಬೂತ್‌ಗೆ ಬರುವಷ್ಟರಲ್ಲಿ ಅವರ ಹೆಸರಿನಲ್ಲಿ ಬೇರೆಯವರು ‘ನಕಲಿ ಮತ’ ಚಲಾಯಿಸಿರುತ್ತಿದ್ದರು. ಇದನ್ನು ತಡೆಯಲು ಬಿಜೆಪಿ ನಾಯಕರು ಈ ಬಾರಿ “ಮೊದಲು ಮತದಾನ, ಬಳಿಕ ಜಲಪಾನ” ಎಂಬ ಸಂದೇಶವನ್ನು ಪ್ರತಿ ಮನೆಮನೆಗೂ ತಲುಪಿಸಿದ್ದರು. “ತಿಂಡಿ ತಿನ್ನುವ ಮುನ್ನವೇ ನಿಮ್ಮ ಹಕ್ಕನ್ನು ಚಲಾಯಿಸಿ” ಎಂಬ ಕರೆಗೆ ಮತದಾರರು ಅಭೂತಪೂರ್ವ ಸ್ಪಂದನೆ ನೀಡಿದ್ದಾರೆ.

ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯ ಕುರಿತು ಸಣ್ಣಪುಟ್ಟ ಅತೃಪ್ತಿಗಳಿದ್ದವು. ಇದರಿಂದ ಬೇಸತ್ತು ಮತದಾರರು ನೋಟಾ ಒತ್ತಲು ಮುಂದಾಗಿದ್ದರು. ಹಲವು ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ನೋಟಾ ಮತಗಳೇ ಹೆಚ್ಚಿರುತ್ತಿದ್ದವು. ಈ ಅಪಾಯವನ್ನು ಅರಿತ ಬಿಜೆಪಿ ನಾಯಕರು “ನೋಟಾ ಬೇಡ, ನಿಮ್ಮ ಮತ ವ್ಯರ್ಥ ಮಾಡಬೇಡಿ” ಎಂಬ ಅಭಿಯಾನ ನಡೆಸಿದರು. ಅತೃಪ್ತ ಮತದಾರರನ್ನು ಮನವೊಲಿಸುವಲ್ಲಿ ಯಶಸ್ವಿಯಾದ ಪಕ್ಷವು, ಪ್ರತಿಯೊಂದು ಮತವೂ ಗೆಲುವಿಗೆ ನಿರ್ಣಾಯಕ ಎಂಬ ಹಠಕ್ಕೆ ಬಿದ್ದಂತೆ ಕೆಲಸ ಮಾಡಿತು.

ತಳಮಟ್ಟದ ಕಾರ್ಯಕರ್ತರ ಶ್ರಮ ಮತ್ತು ಸಮಯ ಪ್ರಜ್ಞೆಯ ತಂತ್ರಗಾರಿಕೆಗಳು ಬಿಜೆಪಿಗೆ ಬಂಗಾಳದ ನೆಲದಲ್ಲಿ ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿವೆ. ವಿರೋಧಿಗಳ ಗೂಂಡಾಗಿರಿ ಮತ್ತು ಮತಗಳ ಸೋರಿಕೆಯನ್ನು ತಡೆಯುವಲ್ಲಿ ಬಿಜೆಪಿ ಹಾಕಿದ ಈ ಯೋಜನೆ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ.