ನಮ್ಮ ದೇಶದಲ್ಲಿ ಅತ್ಯಾಚಾರವೆಸಗಿದ ಕೆಲ ಪ್ರಕರಣಗಳಲ್ಲಿ ಆರೋಪಿಗಳಿಗೆ ರಾಜ ಮರ್ಯಾದೆ ನೀಡಲಾಗಿದೆ. ಪ್ರತಿದಿನವೂ ದೇಶದಲ್ಲಿ ಅತ್ಯಾ*ಚಾರ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಕ್ಕಳು, ಹಸುಳೆಯರು, ಹದಿಹರೆಯದ ಹುಡುಗಿಯರು ಕೊನೆಗೆ ಮುದುಕಿಯರ ಮೇಲೂ ಕಾಮುಕರು ಅತ್ಯಾಚಾರವೆಸಗುತ್ತಿದ್ದಾರೆ. ಹಲವು ಪ್ರಕರಣಗಳಲ್ಲಿ ಸಂತ್ರಸ್ತರನ್ನು ಕೊಂದೇ ಬಿಡುತ್ತಾರೆ.
2022ರ ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋ ನೀಡಿದ ಮಾಹಿತಿಯ ಪ್ರಕಾರ, ದೇಶದಲ್ಲಿ ಪ್ರತಿದಿನವೂ 90 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಇತ್ತೀಚಿನ ಕೆಲ ವರದಿಗಳ ಪ್ರಕಾರ ದಿನವೂ 86ರಿಂದ 89 ರೇಪ್ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಪ್ರತಿ 17 ನಿಮಿಷಗಳಿಗೆ ಒಬ್ಬರ ಮೇಲೆ ಅತ್ಯಾಚಾರವಾಗುತ್ತಿದೆ. ಇನ್ನೂ ಅ ವರದಿ ಆಗದೇ ಇರುವ ರೇಪ್ ಪ್ರಕರಣಗಳು ಹಲವಿವೆ. ಶಾಲೆಗಳಲ್ಲಿ ಶಿಕ್ಷಕರಿಂದ ಮನೆಯಲ್ಲಿ ಸಂಬಂಧಿಕರಿಂದಲೂ ಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿರುವುದು ವಿಪರ್ಯಾಸದ ವಿಚಾರವಾಗಿದೆ. ಅಪರಾಧಿಗಳಿಗೆ ಕಾನೂನಿನ ಭಯ ಇಲ್ಲದೇ ಇರುವುದು ಇದಕ್ಕೆ ಕಾರಣವಾಗಿದೆ.
ಬಹುತೇಕ ಅತ್ಯಾಚಾರ ಪ್ರಕರಣಗಳು ಬಹಳ ವಿಳಂಬವಾಗಿ ವರದಿಯಾಗುವುದರಿಂದ ಹಾಗೂ ಸಾಕ್ಷ್ಯ ನಾಶದಿಂದಾಗಿ ಸಾಕ್ಷಿಯ ಕೊರತೆಯಿಂದಾಗಿ ನಮ್ಮ ದೇಶದಲ್ಲಿ ಹಲವು ಅತ್ಯಾಚಾರ ಆರೋಪಿಗಳು ದೋಷಮುಕ್ತರಾಗಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ ಇದು ಭಾರತದ ಕತೆ. ಇಲ್ಲಿನ ನ್ಯಾಯ ವ್ಯವಸ್ಥೆಯ ನಿಧಾನಗತಿಗೆ ಜನ ಬೇಸತ್ತಿದ್ದಾರೆ. ಆದರೆ ಬ್ರೆಜಿಲ್‌ನಲ್ಲಿ ನಡೆದ ರೇಪ್ ಪ್ರಕರಣವೊಂದರ ತೀರ್ಪು ಈಗ ಸಾಕಷ್ಟು ಚರ್ಚೆಯಲ್ಲಿದೆ. ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಕೊಂದ ಮಹಿಳೆಯನ್ನು ನ್ಯಾಯಾಲಯ ನಿರಪರಾಧಿ ಎಂದು ಘೋಷಣೆ ಮಾಡಿದೆ.
2025ರ ಮಾರ್ಚ್‌ನಲ್ಲಿ ನಡೆದ ಘಟನೆ ಇದು. ಎರಿಕಾ ಪೆರೇರಾ ಡ ಸಿಲ್ವೇರಾ ವಿಸೆಂಟೆ ಎಂಬ ಮಹಿಳೆಯ 11 ವರ್ಷದ ಮಗಳು ತಾನು ವಾಸವಿರುವ ಬ್ರೆಜಿಲ್‌ನ ಬೆಲೊ ಹೊರಿಜಾಂಟೆಯಲ್ಲಿರುವ ತಮ್ಮ ಅಪಾರ್ಟ್ಮೆಂಟ್ ಒಳಗೆ ಜೋರಾಗಿ ಕಿರುಚಾಡುವುದು ಕೇಳಿದೆ. ಕೂಡಲೇ ಕೋಣೆಗೆ ಓಡಿ ಹೋದ ಎರಿಕಾಗೆ ಆಘಾತ ಕಾದಿತ್ತು. ಎರಿಕಾಳ ಗೆಳೆಯ ಎವರ್ಟನ್ ಅಮರೊ ಡ ಸಿಲ್ವಾ ಎಂಬಾತ ಎರಿಕಾಳ ಸ್ವಂತ ಮಗುವಿನ ಮೇಲೆ ಹತ್ತಿ ಕುಳಿತಿದ್ದ. ಇದಕ್ಕೂ ಮೊದಲು ಮಗಳಿಗೆ ಈ ಪಾಪಿ ಕಳುಹಿಸಿದ ಲೈಂಗಿಕವಾಗಿ ಪ್ರೇರೆಪಿಸುವ ಸಂದೇಶಗಳನ್ನು ತಾಯಿ ಎರಿಕಾ ಆಗಲೇ ಗಮನಿಸಿದ್ದಳು.
ಈತನನ್ನು ಉಳಿಸಿದರೆ ತನ್ನ ಮಗಳನ್ನು ಬದುಕುವುದಕ್ಕೆ ಬಿಡುವುದಿಲ್ಲ ಎಂದು ಭಾವಿಸಿ ಎರಿಕಾ ಆತನಿಗೆ ಜ್ಯೂಸ್‌ನಲ್ಲಿ ಅಮಲು ಪದಾರ್ಥ ನೀಡಿದ್ದಾಳೆ. ಬಳಿಕ ಆತನಿಗೆ ಸರಿಯಾಘಿ ಥಳಿಸಿ, ಚೂರಿಯಿಂದ ಇರಿದು ಕೊಲೆ ಮಾಡಿದ್ದಳು. ಆತನ ಜನನಾಂಗವನ್ನು ಕೂಡ ಆಕೆ ಕತ್ತರಿಸಿದ್ದಳು. ಬಳಿಕ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿದ್ದಾಳೆ. ನಂತರ ಅದೇ ರಾತ್ರಿ ಆಕೆ ಪೊಲೀಸರಿಗೆ ಶರಣಾಗಿದ್ದು, ತಾನು ಆತನನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ಬಳಿಕ ಪೊಲೀಸರಿಗೆ ತಿಳಿಸಿ ಕೊಲೆಗೆ ಬಳಸಿದ ಚಾಕುವನ್ನು ನೀಡಿ ಆಕೆ ಪೊಲೀಸರಿಗೆ ಶರಣಾಗಿದ್ದಾಳೆ.
ಸರ್ಕಾರಿ ಪ್ರಾಸಿಕ್ಯೂಟರ್‌ಗಳು ಎರಿಕಾ ಮೇಲೆ ಮೇಲೆ ಗಂಭೀರವಾದ ನರಹತ್ಯೆಯ ಆರೋಪ ಹೊರಿಸಿದರು ಮತ್ತು ಕೊಲೆ ಪೂರ್ವಯೋಜಿತ ಎಂದು ವಾದಿಸಿದರು. ಆದರೆ ಪ್ರತಿವಾದಿಗಳು ಆಕೆ ತನ್ನ ಮಗಳ ಕಾನೂನುಬದ್ಧ ರಕ್ಷಣೆಗಾಗಿ ಹೀಗೆ ವರ್ತಿಸಿದ್ದಾಳೆ ಎಂದು ವಾದಿಸಿದರು. ಈ ಪ್ರಕರಣದ ವಿಚಾರಣೆ ನಡೆದು ಈ ವರ್ಷದ ಮಾರ್ಚ್ 24, 2026 ರಂದು ನ್ಯಾಯಾಧೀಶರು ಆಕೆಯನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದ್ದಾರೆ. ಈ ಖುಲಾಸೆ ಸಾಕ್ಷ್ಯಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದಿರುವ ಪ್ರಾಸಿಕ್ಯೂಷನ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ. ಆದರೆ ನ್ಯಾಯಾಧೀಶರು ನೀಡಿದ ಈ ತೀರ್ಪಿಗೆ ಜನರಿಂದ ಮಾತ್ರ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ.















