ಮನೆ ಸುದ್ದಿ ಜಾಲ ಜಗ್ಗೇಶ್ ಪುತ್ರರಿಂದ ನಿರ್ದೇಶನ  : 12 ವರ್ಷಗಳ ನಂತರ ಬರ್ತಿದೆ ‘ರಾಗಿಣಿ ಐಪಿಎಸ್ 2’ ​

ಜಗ್ಗೇಶ್ ಪುತ್ರರಿಂದ ನಿರ್ದೇಶನ  : 12 ವರ್ಷಗಳ ನಂತರ ಬರ್ತಿದೆ ‘ರಾಗಿಣಿ ಐಪಿಎಸ್ 2’ ​

0

ನಟಿ ರಾಗಿಣಿ ದ್ವಿವೇದಿ ಮೇ 24ರಂದು 36ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲೇ ಜನಪ್ರಿಯ ನಟಿಯ ನೂತನ ಚಿತ್ರದ ಘೋಷಣೆ ಸಹ ಆಗಿದೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್​ ನೀಡಿದ್ದಾರೆ. 12 ವರ್ಷಗಳ ಹಿಂದೆ ರಾಗಿಣಿ ಅವರು ನಾಯಕಿಯಾಗಿ ಅಭಿನಯಿಸಿದ್ದ ರಾಗಿಣಿ ಐಪಿಎಸ್ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಈಗ ಈ ಚಿತ್ರದ ಮುಂದುವರಿದ ಭಾಗ ‘ರಾಗಿಣಿ ಐಪಿಎಸ್ 2’ ಕೆಲಸಗಳು ಸಾಗಿದ್ದು ನವರಸನಾಯಕ ಜಗ್ಗೇಶ್ ಪುತ್ರರಾದ ಗುರುರಾಜ್ ಹಾಗೂ ಯತಿರಾಜ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಟರಾಗಿ ಗುರುತಿಸಿಕೊಂಡಿದ್ದ ಗುರುರಾಜ್ ಹಾಗೂ ಯತಿರಾಜ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಕೆ.ಮಂಜು ಹಾಗೂ ರಾಗಿಣಿ ವೆಂಚರ್ಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ವಿಶೇಷ ಎನ್ನಲಾಗುತ್ತಿದೆ.

ಹಾಗೂ ಈ ಚಿತ್ರದ ಸಣ್ಣ ಗ್ಲಿಂಪ್ಸ್ ಅನಾವರಣಗೊಳಿಸಿದ ಬಳಿಕ ಮಾತನಾಡಿದ ಗುರುರಾಜ್ ಹಾಗೂ ಯತಿರಾಜ್, ”ರಾಗಿಣಿ ಐಪಿಎಸ್, ರಾಗಿಣಿ ಅವರು ಆ್ಯಕ್ಷನ್ ನಟಿಯಾಗಿ ಅಭಿನಯಿಸಿದ್ದ ಸಿನಿಮಾ. ಆ ಚಿತ್ರದಲ್ಲಿ ರಾಗಿಣಿ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಈಗ ಆ ಚಿತ್ರದ ಮುಂದುವರಿದ ಭಾಗ ರಾಗಿಣಿ ಐಪಿಎಸ್ 2 ಅನ್ನು ತರುತ್ತಿದ್ದೇವೆ. ನಾವಿಬ್ಬರು 2019ರಿಂದಲೂ ನಿರ್ದೇಶನಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆವು. ‌ನಟನೆಯೇ ಬೇರೆ. ನಿರ್ದೇಶನವೇ ಬೇರೆ. ನಿರ್ದೇಶನಕ್ಕೆ ತಯಾರಿ ಅಗತ್ಯ. ರಾಗಿಣಿ ಅವರು ಈಗಾಗಲೇ ಸಾಕಷ್ಟು ಜನಪ್ರಿಯರಾಗಿದ್ದಾರೆ. ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿಯೂ ಹೌದು. ಅವರ ಚಿತ್ರ ನಿರ್ದೇಶಿಸುವುದು ಅಷ್ಟು ಸುಲಭವಲ್ಲ. ರಾಗಿಣಿ ಐಪಿಎಸ್ 2, ರಾಗಿಣಿ ಐಪಿಎಸ್ ಚಿತ್ರದ ಮುಂದುವರಿದ ಭಾಗ. ಆ ಚಿತ್ರದ ಕಥೆ ಎಲ್ಲಿ ಕೊನೆಯಾಗಿತ್ತೋ, ಅಲ್ಲಿಂದಲೇ ಮುಂದುವರೆಯುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ” ಎಂದು ತಿಳಿಸಿದರು. ನಂತರ ನಟಿ ರಾಗಿಣಿ ದ್ವಿವೇದಿ ಮಾತನಾಡಿ, ”ನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ ಮಾಧ್ಯಮದವರು ನೀಡುತ್ತಿರುವ ಸಹಕಾರ ಅಪಾರ. ಹಾಗಾಗಿ, ನನ್ನ ನೂತನ ಚಿತ್ರದ ಘೋಷಣೆಯನ್ನು ನನ್ನ ಹುಟ್ಟುಹಬ್ಬದ ದಿನ ಮಾಧ್ಯಮದವರ ಉಪಸ್ಥಿತಿಯಲ್ಲೇ ಮಾಡುತ್ತಿದ್ದೇವೆ.

ಆದರಿಂದ ಕೆ.ಮಂಜು ಅವರು ನಿರ್ಮಾಣಕ್ಕೆ ಜೊತೆಯಾಗಿರುವುದು ಹಾಗೂ ಜಗ್ಗೇಶ್ ಪುತ್ರರಾದ ಗುರುರಾಜ್ – ಯತಿರಾಜ್ ನಿರ್ದೇಶಿಸುತ್ತಿರುವುದು ಖುಷಿಯಾಗಿದೆ” ಎಂದರು. ನಂತರ ನಿರ್ಮಾಪಕ ಕೆ.ಮಂಜು ಮಾತನಾಡಿ, ”ನಾಯಕಿಯಾಗಿ ರಾಗಿಣಿ ಅವರು ಚಿತ್ರರಂಗಕ್ಕೆ ಬಂದ ದಿನದಿಂದಲೂ ಅವರನ್ನು ಬಲ್ಲೆ. ಉತ್ತಮ ನಟಿ. ಇತ್ತೀಚೆಗೆ ಫೋನ್ ಮಾಡಿ ನಿಮಗೆ ಕಥೆ ಹೇಳಲು ನಿರ್ದೇಶಕರು ಬರುತ್ತಿದ್ದಾರೆಂದು ಹೇಳಿದರು. ಆದ್ರೆ ಯಾರು ಎಂದು ತಿಳಿಸಲಿಲ್ಲ. ಆ ನಂತರ ನನ್ನ ಆತ್ಮೀಯ ಸ್ನೇಹಿತರಾದ ಜಗ್ಗೇಶ್ ಅವರ ಮಕ್ಕಳಾದ ಗುರುರಾಜ್ – ಯತಿರಾಜ್ ಬಂದು ರಾಗಿಣಿ ಐಪಿಎಸ್ 2 ಚಿತ್ರದ ಕಥೆ ಹೇಳಿದರು. ಕಂಟೆಂಟ್ ಚೆನ್ನಾಗಿದೆ. ರಾಗಿಣಿ ವೆಂಚರ್ಸ್ ನಿರ್ಮಾಣಕ್ಕೆ ಜೊತೆಯಾಗಿದೆ. ಆದಷ್ಟು ಬೇಗ ಚಿತ್ರಕ್ಕೆ ಚಾಲನೆ ಸಿಗಲಿದೆ” ಎಂದರು ಎನ್ನಲಾಗಿದೆ.