ಮನೆ ಮನೆ ಮದ್ದು ಮುಳ್ಳು ಧತ್ತೂರಿ

ಮುಳ್ಳು ಧತ್ತೂರಿ

0

ರಾಗಿ, ಜೋಳ ಹೊಲದ ಕಟಾವಿನ ಅನಂತರ ಮೊಳೆಯುವ ಕಳೆ ಸಸ್ಯ, ಮೈಮೇಲೆಲ್ಲಾ ಮಿದು ಮುಳ್ಳುಗಳು. ಎಲೆ ಕಿತ್ತಾಗ ಹೊಂಬಣ್ಣದ ಹಾಲು, ಹಾಗಾಗಿ ಸ್ವರ್ಣಕ್ಷೀರಿ ಎಂಬ ಹೆಸರು ಇವೆ. ಮೆಕ್ಸಿಕನ್ ಪಾಪ್ಪಿ, ಪ್ರಿಕ್ಲೀ ಪಾಪ್ಪಿ ಎಂಬ ಆಂಗ್ಲ ಹೆಸರೂ ಇವೆ. ಹಳದಿ ಹೂ, ಮುಳ್ಳು ಮೊನಸಿನ ಅಮಟೆಕಾಯಿ ಗಾತ್ರದ ಕಾಯಿಗಳಿರುತ್ತದೆ. ಅದರ ಒಳಗೆ ಕರಿ ಬೀಜ ಸಾಲು, ಸಾಸಿವೆ ಮತ್ತು ಎಳ್ಳಿನಂತೆ ಸಾಲು ಸಾಲು ಬೀಜಗಳಿರುತ್ತದೆ. ಎಲೆ, ಬೀಜದಲ್ಲಿ ಮಾರ್ಫಿನ್ ಸತ್ವಗಳಿರುತ್ತದೆ, ಅರ್ಜಿಮೋನಿನ್ ಎಂಬ ಕ್ಷಾರ ಸಹ ಇರುತ್ತದೆ.

ಪೊಟ್ಯಾಸಿಯಂ ನೈಟ್ರೇಟು ಸಹ ಇದರಲ್ಲಿ ಇದೆ. ಕೆಲವರ ಪ್ರಕಾರ ಇದು ವಿದೇಶಿ ಮೂಲದ ಕಳೆಯಾಗಿದೆ. ಕರಿ ಬೀಜಗಳು ವಿರೇಚಕಗಳಾಗಿವೆ. ಚರ್ಮರೋಗ ಪರಿಹಾರಕ, ಎಣ್ಣೆ ಸಹ ಬೇಧಿಕಾರಿ, ಚರ್ಮ ರೋಗಗಳಲ್ಲಿ ಹಚ್ಚಲು ಉಪಕಾರಿ. ಹೊಸ ಬೀಜ ವಾಂತಿಕಾರಕ. ಒಂದು ವರ್ಷ ಸಂಗ್ರಹಿಸಿ ಆನಂತರ ತೆಗೆಯುವ ಬೀಜ ತೈಲವು ಬೇಧಿಗೆ ಉತ್ತಮ. ಹರಳೆಣ್ಣೆಗಿಂತಲೂ ಉತ್ತಮ. ಹರಳೆಣ್ಣೆಯಂತಹ ದುರ್ಗಂಧವೂ ಇರುವುದಿಲ್ಲ. ತೊನ್ನು, ಸೋರಿಯಾಸಿಸ್, ಸರ್ಪಸುತ್ತು ಕಾಯಿಲೆಗೆ ಸಹ ಬಾಹ್ಯಾಭ್ಯಂತರ ಬಳಕೆಗೆ ಯೋಗ್ಯವಾಗಿದೆ.

ಔಷಧೀಯ ಗುಣಗಳು :-

* ಕೆಂಗಣ್ಣು ಕಾಯಿಲೆಗೆ ಎಲೆಯ ತಾಜಾ ರಸ ಹಚ್ಚಿದರೆ ಶೀಘ್ರ ಉಪಶಮನ. ಒಣಗಿದ ಎಲೆ ಪುಡಿ ಸಂಗಡ ತುಪ್ಪ ಅಥವಾ ಹಾಲು ಬೆರೆಸಿ ಕಣ್ಣಿನ ಮೇಲ್ಭಾಗದಲ್ಲಿ ಲೇಪಿಸುವುದರಿಂದ ಲಾಭ.

* ತುರಿಗಜ್ಜಿಗೆ ಹಳೆಯ ಗಾಯಕ್ಕೆ ಎಲೆ ಅರೆದು ಲೇಪಿಸಿರಿ.

* ಚಿಗುರಲೆಗಳನ್ನ ಹಾಲಿನ ಜತೆಗೆ ಅರೆದು ಕುಡಿಸಿದರೆ (ಮುಟ್ಟಿನ ಅನಂತರದ ನಾಲ್ಕು ದಿನ) ಮುಟ್ಟು ತೊಂದರೆ ಪರಿಹಾರವಾಗುತ್ತದೆ. ಬಂಜೆತನವು ದೂರವಾಗಲು ಸಹಕಾರಿಯಾಗಿದೆ.

*  ಜಾನಪದ ವೈದ್ಯರಂತೂ ಮುಳ್ಳುಧತ್ತೂರಿಯನ್ನು ಧಾರಾಳ ಬಳಸುತ್ತಾರೆ. (ನೆನಪಿಡಿ ದತ್ತೂರ ಬೇರೆಯೇ ಸಸ್ಯ).

*  ಹಳದಿರಸವನ್ನು ಸೇವಿಸಿದರೆ ಕಾಮಾಲೆ, ಹಳೆಯ ಜ್ವರ, ಉದರಗತ ಜಲಸಂಚಯ (ಜಲೋದರ) ಪರಿಹಾರ. ಘೃತದ ಜೊತೆಗೆ ಸೇವಿಸಬಹುದು. ಮಲೇರಿಯಾ ಪ್ರತಿಬಂಧ.