ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರಿಗೆ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿದೆ.
ಏನಿದು ಪ್ರಕರಣ?
ಪ್ರಜ್ವಲ್ ರೇವಣ್ಣ ಅವರದ್ದು ಅಂತ ಬಿಡುಗಡೆಯಾಗಿರುವ ಅಶ್ಲೀಲ ವಿಡಿಯೋದಲ್ಲಿ ನನ್ನ ತಾಯಿಯ ಚಿತ್ರವೂ ಇದ್ದು, ಇದೀಗ ಅವರು ಕಣ್ಮರೆಯಾಗಿದ್ದಾರೆ ಎಂದು ಮೇ 2ರ ತಡರಾತ್ರಿ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ಸಂತ್ರಸ್ತೆ ಪುತ್ರ ದೂರು ನೀಡಿದ್ದರು. ಪ್ರಕರಣ ಸಂಬಂಧ ರೇವಣ್ಣ ಪತ್ನಿ ಭವಾನಿಯವರ ಸಂಬಂಧಿಯೂ ಆಗಿರುವ ಸತೀಶ್ ಬಾಬು ಎಂಬವರನ್ನು ಈಗಾಗಲೇ ಎಸ್ಐಟಿ ಬಂಧಿಸಿದೆ. ಇವರನ್ನು ಆರೋಪಿ ಸಂಖ್ಯೆ 2 ಎಂದು ಎಸ್ಐಟಿ ಗುರುತಿಸಿದೆ. ಹೆಚ್ಡಿ ರೇವಣ್ಣ ಮೊದಲ ಆರೋಪಿಯಾಗಿದ್ದಾರೆ. ಇದೇ ಕೇಸ್ ಈಗ ಭವಾನಿ ರೇವಣ್ಣಗೆ ಉರುಳಾಗಿ ಪರಿಣಮಿಸಿದೆ.
ವಿಚಾರಣೆಗೆ ಹಾಜರು
ಭವಾನಿ ರೇವಣ್ಣಗೆ ಎಸ್ಐಟಿ ಎರಡೆರಡು ನೋಟಿಸ್ ಕೊಟ್ಟಿತ್ತು. ಮನೆಯಲ್ಲೇ ವಿಚಾರಣೆಗೆ ಹಾಜರಾಗುವುದಾಗಿ ಭವಾನಿ ಪತ್ರ ಬರೆದಿದ್ದರು. ಪತ್ರದಂತೆ ಎಸ್ಐಟಿ ಅಧಿಕಾರಿಗಳು ಹೊಳೆನರಸೀಪುರದಲ್ಲಿರುವ ನಿವಾಸಕ್ಕೆ ಬಂದಿದ್ದರು. ಆದರೆ, ಮನೆಯೊಳಗೆ ಹೋದ ಎಸ್ಐಟಿ ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಭವಾನಿ ರೇವಣ್ಣ ಮನೆಯಲ್ಲಿ ಇರಲಿಲ್ಲ. ಇದರಿಂದ ಎಸ್ಐಟಿ ಅಧಿಕಾರಿಗಳು ಸಂಜೆಯ ವರೆಗು ಕಾದು ನಿರಾಸೆಯಿಂದ ತೆರಳಿದ್ದಾರೆ.