ಮನೆ ಅಪರಾಧ ಬೆಳಗಾವಿ : ರೆಸಾರ್ಟ್‌ನಲ್ಲಿ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಇಬ್ಬರ ಬಂಧನ

ಬೆಳಗಾವಿ : ರೆಸಾರ್ಟ್‌ನಲ್ಲಿ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಇಬ್ಬರ ಬಂಧನ

0

ಬೆಳಗಾವಿ : ಬೆಳಗಾವಿ ಹೊರವಲಯದ ರೆಸಾರ್ಟ್‌ನಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಹೃದಯವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳಲ್ಲಿ ಒಬ್ಬನು ಸಾಕೀಬ್ ಎಂಬಾತನಾಗಿದ್ದು, ಉಳಿದ ಇಬ್ಬರು ಅಪ್ರಾಪ್ತರು. ಪ್ರಕರಣದ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿಯನ್ನು ಹುಡುಕುವ ಕಾರ್ಯ ನಡೆಯುತ್ತಿದೆ.

ಸಪ್ತಾಹದ ಹಿಂದೆ ಈ ಭೀಕರ ಘಟನೆ ಬೆಳಗಾವಿಯ ಹೊರವಲಯದ ಒಂದು ಖಾಸಗಿ ರೆಸಾರ್ಟ್‌ನಲ್ಲಿ ನಡೆದಿದೆ. ಸಾಕೀಬ್ ತನ್ನ ಹೆಸರಿನಲ್ಲಿ ಆ ರೆಸಾರ್ಟ್‌ನಲ್ಲಿ ರೂಮ್‌ ಬುಕ್ ಮಾಡಿದ್ದನು. ಆ ಬಾಲಕಿಗೆ ಸ್ನೇಹಿತನಾಗಿದ್ದ ಅಪ್ರಾಪ್ತ ಆರೋಪಿಯೊಬ್ಬನು ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಅಲ್ಲಿಗೆ ಹೋಗಿದ್ದನು. ಬಳಿಕ ಸಾಕೀಬ್ ಹಾಗೂ ಇಬ್ಬರು ಅಪ್ರಾಪ್ತರು ಸೇರಿಕೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರೆಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರದ ನಂತರ ಬಾಲಕಿ ಮನೆಗೆ ಹಿಂದಿರುಗಿದಾಗ, ತೀವ್ರ ಹೊಟ್ಟೆ ನೋವನ್ನು ಅನುಭವಿಸುತ್ತಿದ್ದಳು. ಬಾಲಕಿಯ ತಾಯಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದಾಗ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರದ ಅಂಶಗಳು ಬೆಳಕಿಗೆ ಬಂದವು. ತಕ್ಷಣವೇ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಲಾಗಿದೆ.

ಪೋಲೀಸರು ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಾಕೀಬ್ ಮತ್ತು ಮತ್ತೊಬ್ಬ ಅಪ್ರಾಪ್ತನನ್ನು ಬಂಧಿಸಿರುವ ಪೊಲೀಸರು, ಮೂರನೇ ಆರೋಪಿಯಾದ ಅಪ್ರಾಪ್ತ ಬಾಲಕನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಅವರನ್ನು ಶೀಘ್ರದಲ್ಲೇ ವಶಕ್ಕೆ ಪಡೆಯುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.