ಮನೆ ಅಂತಾರಾಷ್ಟ್ರೀಯ ಭ್ರಷ್ಟಾಚಾರ ಆರೋಪ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ

ಭ್ರಷ್ಟಾಚಾರ ಆರೋಪ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ

0
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನ ಭೀತಿ ಕೊನೆಗೂ ನಿಜವಾಗಿದೆ. ಸಶಸ್ತ್ರ ಕಮಾಂಡೋ ಪಡೆಯ ಸಿಬ್ಬಂದಿ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್ ಹೊರಭಾಗದಲ್ಲಿ ಮಂಗಳವಾರ ಬಂಧಿಸಲಾಗಿದೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್ ಹೊರಭಾಗದಲ್ಲಿ ಅರೆಸೇನಾ ಪಡೆಯ ರೇಂಜರ್ಗಳು ಮಂಗಳವಾರ ಬಂಧಿಸಿದ್ದಾರೆ ಎಂದು ಪಾಕಿಸ್ತಾನದ ಡಾನ್ ನ್ಯೂಸ್ ವರದಿ ಮಾಡಿದೆ.

ಈ ವೇಳೆ ನಡೆದ ಘರ್ಷಣೆಯಲ್ಲಿ ಇಮ್ರಾನ್ ಖಾನ್ ಅವರ ಪರ ವಕೀಲರಿಗೆ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ. ಅವರ ತಲೆಯಿಂದ ರಕ್ತ ಸುರಿಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆಲ್ ಖಾದಿರ್ ಟ್ರಸ್ಟ್ ಹಗರಣ ಪ್ರಕರಣದಲ್ಲಿ ಇಮ್ರಾನ್ ಖಾನ್ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಈ ಬಂಧನದ ಬೆನ್ನಲ್ಲೇ ಇಸ್ಲಾಮಾಬಾದ್ನ ಅನೇಕ ವಲಯಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಇಮ್ರಾನ್ ಖಾನ್ ಅವರನ್ನು ಸುತ್ತುವರಿದು ಬಂಧಿಸಿದ ಐವತ್ತಕ್ಕೂ ಹೆಚ್ಚು ರೇಂಜರ್ಗಳು, ಅವರನ್ನು ವಾಹನದಲ್ಲಿ ಕೂರಿಸಿ ಬೇರೆ ಸ್ಥಳಕ್ಕೆ ಕರೆದೊಯ್ಯವುದು ವಿಡಿಯೋಗಳಲ್ಲಿ ಕಾಣಿಸಿದೆ. ತಮ್ಮ ವಿರುದ್ಧ ದಾಖಲಾದ ಹಲವು ಎಫ್.ಐ.ಆರ್ಗಳಲ್ಲಿ ಜಾಮೀನು ಪಡೆಯುವ ಸಲುವಾಗಿ ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್ ಹೈಕೋರ್ಟ್ಗೆ ತೆರಳಿದ್ದರು. ಅವರನ್ನು ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ (ಎನ್ಎಬಿ) ಬಂಧಿಸಿದೆ. ಬಳಿಕ ಅವರನ್ನು ಕಪ್ಪು ಬಣ್ಣದ ವಿಗೋ ಕಾರಿನಲ್ಲಿ ಬೇರೆಡೆಗೆ ಸ್ಥಳಾಂತರಸಲಾಗಿದೆ.

"ರೇಂಜರ್ಗಳು ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಅಪಹರಿಸಿದ್ದಾರೆ. ಪಾಕಿಸ್ತಾನದ ಧೈರ್ಯಶಾಲಿ ಜನರು ಹೊರಗೆ ಬಂದು ತಮ್ಮ ದೇಶದ ಪರ ಹೋರಾಡಬೇಕು" ಎಂದು ಪಿಟಿಐ ಟ್ವೀಟ್ ಮಾಡಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಲಂಡನ್ನಲ್ಲಿ ಬ್ರಿಟನ್ ರಾಜ ಚಾರ್ಲ್ಸ್ ಅವರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಅವರು ಮಂಗಳವಾರ ಸ್ವದೇಶಕ್ಕೆ ವಾಪಸಾಗಬೇಕಿತ್ತು. ಆದರೆ ಇನ್ನೂ ಒಂದು ದಿನ ಅವರು ಬ್ರಿಟನ್ ಪ್ರವಾಸ ವಿಸ್ತರಿಸಿದ್ದು ಹಾಗೂ ಅದೇ ವೇಳೆ ಇಮ್ರಾನ್ ಖಾನ್ ಬಂಧನವಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಈ ಬಂಧನವನ್ನು ಖಚಿಪಡಿಸಿರುವ ಇಸ್ಲಾಮಾಬಾದ್ ಪೊಲೀಸ್ ಮಹಾ ನಿರ್ದೇಶಕ (ಐಜಿಪಿ) ಡಾ ಅಕ್ಬರ್ ನಾಸಿರ್ ಖಾನ್, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ

ಸಮನ್ಸ್ ನೀಡಿದ ಹೈಕೋರ್ಟ್

ಇಮ್ರಾನ್ ಖಾನ್ ಬಂಧನದ ಬೆನ್ನಲ್ಲೇ ಈ ವಿಚಾರವನ್ನು ಪರಿಗಣನೆಗೆ ತೆಗೆದುಕೊಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಮೆರ್ ಫರೂಕ್ ಅವರು 15 ನಿಮಿಷಗಳ ಒಳಗೆ ಇಸ್ಲಾಮಾಬಾದ್ ಐ.ಜಿ ಮತ್ತು ಒಳಾಡಳಿತ ಕಾರ್ಯದರ್ಶಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ಕೋರ್ಟ್ ಮುಂದೆ 15 ನಿಮಿಷಗಳಲ್ಲಿ ಹಾಜರಾಗುವಂತೆ ಹೆಚ್ಚುವರಿ ಅಟಾರ್ನಿ ಜನರಲ್ಗೆ ಸೂಚಿಸಿದ ಅವರು, ಬಂಧನದ ಹಿಂದೆ ಯಾರಿದ್ದಾರೆ ಎಂದು ಈ ಕೂಡಲೇ ಪತ್ತೆ ಮಾಡುವಂತೆ ಆದೇಶಿಸಿದ್ದಾರೆ.



















 
ಹಿಂದಿನ ಲೇಖನಕರ್ನಾಟಕ ಸಿಇಟಿ ಪ್ರವೇಶ ಪತ್ರ ಬಿಡುಗಡೆ: ಮೇ 20ಕ್ಕೆ ಪ್ರವೇಶ
ಮುಂದಿನ ಲೇಖನಮುಸ್ಲಿಂ ಮೀಸಲಾತಿ ರದ್ಧತಿಗೆ ತಡೆ; ಮಧ್ಯಂತರ ಆದೇಶ ವಿಸ್ತರಿಸಿದ ಸುಪ್ರೀಂ ಕೋರ್ಟ್