ಮೆಹಬೂಬ್ನಗರ(ತೆಲಂಗಾಣ): ವೇಗವಾಗಿ ಬಂದ ಸ್ಪೋರ್ಟ್ಸ್ ಬೈಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿರುವ ದಾರುಣ ಘಟನೆ ಮೆಹಬೂಬ್ನಗರದ ಹೊರವಲಯದಲ್ಲಿ ತಡರಾತ್ರಿ ಸಂಭವಿಸಿದೆ. ನಗರದ ಬೈಪಾಸ್ ರಸ್ತೆಯ ಪಾಲಕೊಂಡ ಜಂಕ್ಷನ್ನಲ್ಲಿ ಭಾನುವಾರ ಮಧ್ಯರಾತ್ರಿ ಈ ಭೀಕರ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ.
ಈ ಕುರಿತು ಸ್ಥಳೀಯ ನಿವಾಸಿಗಳು ಮತ್ತು ಪೊಲೀಸರ ಪ್ರಕಾರ, ಬಾಸಿತ್ ಕುಟುಂಬ ಸದಸ್ಯರೊಂದಿಗೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಿಂತಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಕಾರು ಪಾಲಕೊಂಡ ಜಂಕ್ಷನ್ನಲ್ಲಿ ಯು ಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ, ಅತಿ ವೇಗದಲ್ಲಿ ಬಂದ ಸ್ಪೋರ್ಟ್ಸ್ ಬೈಕ್, ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಬಾಸಿತ್ ಅವರ ಪತ್ನಿ ಸಾರಾ (30), ಒಂಬತ್ತು ವರ್ಷದ ಮಗ ಹುಜೈಫಾ ಮತ್ತು 18 ತಿಂಗಳ ಅಮ್ಮರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಪೋರ್ಟ್ಸ್ ಬೈಕ್ ಸವಾರ ಹೈದರಾಬಾದ್ನ ದಿವಾನ್ ದೇವ್ಡಿ ಪ್ರದೇಶದ ನಿವಾಸಿ ಅವೆಜ್ (26) ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಸ್ನೇಹಿತ ಮೆಹದಿಪಟ್ನಂನ ಯಾಕುಬ್ ಅಫ್ಜಲ್ (25) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಹಲವರು ಇದೇ ವೇಳೆ ಗಾಯಗೊಂಡಿದ್ದಾರೆ. ಬಾಸಿತ್ ಅವರ ಸೋದರ ಮಾವನ ಪತ್ನಿ ರೇಷ್ಮಾ, ಮೂರು ವರ್ಷದ ಮಗ ಇಮಾದ್ ಮತ್ತು ಬಾಸಿತ್ ಅವರ ಚಿಕ್ಕಮ್ಮ ಗೌಸಿಯಾ ಬೇಗಂ ಗಾಯಗೊಂಡಿದ್ದಾರೆ.
ಇಮಾದ್ ಸ್ಥಿತಿ ಇನ್ನೂ ಗಂಭೀರವಾಗಿದ್ದು, ಕಾರು ಚಲಾಯಿಸುತ್ತಿದ್ದ ಬಾಸಿತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಶ್ಚಿಯನ್ ಪಲ್ಲಿಯಲ್ಲಿರುವ ಫಂಕ್ಷನ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಭಾಗವಹಿಸಲು ಹೈದರಾಬಾದ್ನಿಂದ ಯುವಕರ ಗುಂಪು ಬಂದಿತ್ತು. ಸುಮಾರು 12 ಸ್ಪೋರ್ಟ್ಸ್ ಬೈಕ್ಗಳಲ್ಲಿ ಬಂದಿದ್ದ ಯುವಕರು ಸ್ಪರ್ಧೆಗಿಳಿದು ವೇಗದ ಚಾಲನೆ ಮಾಡಿದ್ದಾರೆ. ಈ ಅತಿ ವೇಗದ ಚಾಲನೆ ವೇಳೆ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಹಾಗೂ 11 ಬೈಕ್ಗಳು ಪಾಲಕೊಂಡ ಜಂಕ್ಷನ್ನಿಂದ ಸುರಕ್ಷಿತವಾಗಿ ದಾಟಿದ್ದವು. ಆದರೆ, ಕೊನೆಯ ಬೈಕ್ ನಿಯಂತ್ರಣ ತಪ್ಪಿ ಬಾಸಿತ್ ಅವರ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಸ್ಥಳೀಯ ನಿವಾಸಿಗಳು ಮಧ್ಯಪ್ರವೇಶಿಸುವ ಮೊದಲು ಕೆಲವು ಬೈಕ್ ಸವಾರರು ಮೃತ ಸ್ನೇಹಿತರ ಶವಗಳನ್ನು ಅಪಘಾತದ ಸ್ಥಳದಿಂದ ಸ್ಥಳಾಂತರಿಸಲು ಪ್ರಯತ್ನಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ವೇಳೆ, ಉಂಟಾದ ಗೊಂದಲ ಮತ್ತು ಆಕ್ರೋಶದಿಂದ ಹಲವಾರು ಬೈಕ್ ಸವಾರರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

















