ಮನೆ ದೇವಸ್ಥಾನ ತೊಣ್ಣೂರಿನ ನಂಬಿ ನಾರಾಯಣ ದೇವಾಲಯ

ತೊಣ್ಣೂರಿನ ನಂಬಿ ನಾರಾಯಣ ದೇವಾಲಯ

0

ಆಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀ. ರಾಮಾನುಜಾಚಾರ್ಯರ ಪಾದಸ್ಪರ್ಶದಿಂದ ಪಾವನವಾದ ಹಾಗೂ 12 ವರ್ಷಗಳ ಕಾಲ ಇಲ್ಲಿ ನೆಲೆಸಿದ್ದ ಅವರ ತಪಃಶಕ್ತಿಯಿಂದ ಪವಿತ್ರವಾದ ಪುಣ್ಯಭೂಮಿ ತೊಣ್ಣೂರು.

ಮೇಲುಕೋಟೆಯ ಬಳಿ ಇರುವ ಈ ಊರು, ಹಲವು ದೇವಾಲಯಗಳ ಬೀಡು, ಇಲ್ಲಿರುವ ನಂಬಿ ನಾರಾಯಣ ದೇವಾಲಯ ಊರಿನ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ತೊಣ್ಣೂರಿನ ನಂಬಿ ಎಂಬ ರಾಮಾನುಜಾಚಾರ್ಯರ ಭಕ್ತನಿಗೆ ನಾರಾಯಣ ಅನಗ್ರಹಿಸಿದ ಕಾರಣ ಇದಕ್ಕೆ ನಂಬಿ ನಾರಾಯಣ ಎಂಬ ಹೆಸರು ಬಂದಿದೆ.  ಪುರಾಣ ಮತ್ತು ಇತಿಹಾಸದೊಂದಿಗೆ ನಂಟುಳ್ಳ ಈ ದೇವಾಲಯದಲ್ಲಿರುವ ನಾರಾಯಣ ಸ್ವಾಮಿಯನ್ನು ದೇವತೆಗಳ ರಾಜ ದೇವೇಂದ್ರ ತನಗೆ ಬಂದಿದ್ದ ಬ್ರಹ್ಮಹತ್ಯಾ ದೋಷ ನಿವಾರಣಾರ್ಥವಾಗಿ ಪ್ರತಿಷ್ಠಾಪಿಸಿ ಪೂಜಿಸಿದ ಪಂಚ ನಾರಾಯಣ ಕ್ಷೇತ್ರಗಳಲ್ಲಿ ಒಂದೆಂದು ಹೇಳಲಾಗುತ್ತದೆ. ದೇವೇಂದ್ರ ಪ್ರತಿಷ್ಠಾಪಿಸಿದ ಐದು ನಾರಾಯಣ ಕ್ಷೇತ್ರಗಳನ್ನೂ ರಾಮಾನುಜಾಚಾರ್ಯರು, ಜೈನ ಮತಾವಲಂಬಿಯಾಗಿದ್ದ ಬಿಟ್ಟಿದೇವ ವೈಷ್ಣವ ಧರ್ಮ ದೀಕ್ಷೆ ಪಡೆದು  ವಿಷ್ಣುವರ್ಧನನಾದ ಬಳಿಕ ಜೀರ್ಣೋದ್ಧಾರ ಮಾಡಿಸಿ, ಪುನರ್ ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ.  ಈ ಐದು ಕ್ಷೇತ್ರಗಳು ತೊಣ್ಣೂರಿನ ನಂಬಿ ನಾರಾಯಣ, ಮೇಲುಕೋಟೆಯ ಚಲುವ ನಾರಾಯಣ, ಗದಗಿನ ವೀರ ನಾರಾಯಣ, ಗುಂಡ್ಲುಪೇಟೆಯ ವಿಜಯ ನಾರಾಯಣ ಹಾಗೂ ತಲಕಾಡಿನ ಕೀರ್ತಿನಾರಾಯಣ ಎಂದು ಹೇಳಲಾಗುತ್ತದೆ.

ಹೀಗೆ ಪಂಚ ನಾರಾಯಣ ಕ್ಷೇತ್ರಗಳಲ್ಲಿ ಮೊದಲನೆಯದಾದ ನಂಬಿ ನಾರಾಯಣ ದೇವಾಲಯವನ್ನು ಹೊಯ್ಸಳರ ದೊರೆ ವಿಷ್ಣುವರ್ಧನ ತಲಕಾಡಿನಲ್ಲಿ ಚೋಳರ ವಿರುದ್ಧ ವಿಜಯ ಸಾಧಿಸಿದ ಸಂಭ್ರಮದಲ್ಲಿ ತನ್ನ ಮಹಾಪ್ರಧಾನ ಅಧಿಕಾರಿ ಸುರಿಗೆ ನಾಗಯ್ಯನ ಮೂಲಕ ಕಟ್ಟಿಸಿದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಇಲ್ಲಿ ಒಟ್ಟು  21 ಶಾಸನಗಳು ದೊರೆತಿವೆ..

 ಬೃಹತ್ ಆದ ಈ ದೇವಾಲಯ ಪ್ರವೇಶದ್ವಾರ, ಸುಕನಾಸಿ, ನವರಂಗ, ಮುಖ ಮಂಟಪ, ಅರ್ಧ ಮಂಟಪ ಹಾಗೂ ಗರ್ಭಗೃಹಗಳನ್ನು ಒಳಗೊಂಡು ಸುಂದರವಾಗಿದೆ. ಇಲ್ಲಿರುವ ನಾರಾಯಣ ಶಂಖ, ಚಕ್ರ ಧರಿಸಿದ್ದು ಅದ್ಭುತವಾಗಿದೆ. ದಪ್ಪ ಗ್ರಾನೈಟ್ ಕಲ್ಲುಗಳಿಂದ ಕಟ್ಟಲಾಗಿರುವ ದೇವಾಲಯದ ಹೊರ ಭಿತ್ತಿಗಳಲ್ಲಿ ಚೌಕ ಅರೆಗಂಬಗಳೂ ಆಳವಿಲ್ಲದ ಗೂಡುಗಳೂ ಮೇಲೆ ಪಿರಮಿಡ್ಡಿನಾಕೃತಿಯ ಅರೆಗೋಪುರಗಳೂ ಇವೆ; ಬುಡದಲ್ಲಿ ಅಷ್ಟಕೋನಾಕೃತಿಯ ಅಥವಾ ದುಂಡಾದ ದಿಂಡುಗಳಿವೆ. ಐವತ್ತು ಕಂಬಗಳಿಂದ ಕೂಡಿದ ಮಹಾರಂಗ ಮಂಟಪವಿದೆ,  ನವರಂಗದಲ್ಲಿ ತಿರುಗಣೆಯಲ್ಲಿ ಕಡೆದು ಹೊಳಪುಕೊಟ್ಟು ಮಾಡಿರುವ ಹೊಯ್ಸಳ ರೀತಿಯ ಬಳಪದಕಲ್ಲಿನ ಕಂಬಗಳಿವೆ.

ಮುಖಮಂಟಪ ಮತ್ತು ಪಾತಾಳಾಂಕಣಗಳು, ಸುತ್ತಲೂ ಎತ್ತರವಾಗಿ ನಿರ್ಮಿತವಾಗಿರುವ ಎರಡು ಸುತ್ತು ಪ್ರಾಕಾರಗಳು ವಿಜಯನಗರ ಮತ್ತು ಮೈಸೂರರಸರ ಕಾಲದವೆಂದು ಇತಿಹಾಸಜ್ಞರು ಹೇಳುತ್ತಾರೆ.

ಪ್ರಧಾನ ಗರ್ಭಗೃಹದಲ್ಲಿ ನಿಂತಿರುವ ಭಂಗಿಯಲ್ಲಿರುವ ನಾರಾಯಣನ ಸುಂದರ ಮೂರ್ತಿಯಿದೆ. ದೇವಾಲಯದ ಎದುರು 45 ಅಡಿ ಎತ್ತರವಾದ ಗರುಡಗಂಬವಿದೆ. ದೇವಾಲಯದಲ್ಲಿ ಅಷ್ಟದಿಕ್ಪಾಲಕರು, ಲಕ್ಷ್ಮೀಯ ಮೂರ್ತಿಗಳಿವೆ.

ದೇವಾಲಯದ ಮುಂದಿನ ಹಚ್ಚ ಹಸುರಿನ ಹುಲ್ಲುಗಾವಲಿನಲ್ಲಿ ಕಲ್ಲಿನ ರಥಚಕ್ರಗಳಿದ್ದು, ಹಿಂದೆ ರಥಗಳಿಗೆ ಈ ಕಲ್ಲಿನ ಚಕ್ರ ಅಳವಡಿಸಲಾಗುತ್ತಿತ್ತು ಎಂದು ಇತಿಹಾಸಜ್ಞರು ತಿಳಿಸುತ್ತಾರೆ. ದೇವಾಲಯದ ಹಿಂಭಾಗದಲ್ಲಿ ಬೆಟ್ಟಗಳ ಸಾಲಿದ್ದು, ಪ್ರಕೃತಿ ರಮಣೀಯವಾಗಿದೆ. ಊರಿನಲ್ಲಿ ಅತಿ ದೊಡ್ಡ ಕೆರೆಯಿದ್ದು, ರಾಮಾನುಜಾಚಾರ್ಯರು ಎರಡು ಬೆಟ್ಟಗಳ ನಡುವೆ ಕಟ್ಟೆ ಕಟ್ಟಿ ಇಲ್ಲಿ ಜಲ ಸಂರಕ್ಷಣೆ ಮಾಡಿದರು ಎಂದು ತಿಳಿದುಬರುತ್ತದೆ. 300 ಅಡಿ ಆಳ ಇದೆಎನ್ನಲಾಗುವ ಈ ಕೆರೆ ಕಟ್ಟಿದ ದಿನದಿಂದಲೂ ಇಲ್ಲಿಯವರೆಗೆ ಬತ್ತಿಲ್ಲ. ಈ ಕೆರೆಯ ಒಳಗೆ ಚಿನ್ನದ ಮಂದಿರವಿದೆ ಎಂಬ ಪ್ರತೀತಿಯೂ ಇದೆ.  

ರಾಜ ವಿಷ್ಣುವರ್ಧನನ ತಾಯಿ ಮೊದಲ ಮಹಾದೇವಿ ಈ ಊರಿನಲ್ಲಿ ತುಪ್ಪಲೇಶ್ವರ ದೇವಾಲಯ ಕಟ್ಟಿಸಿದಳೆಂದೂ ಅದಕ್ಕೆ ಹೊಯ್ಸಳರ ದೊರೆ ವಿಷ್ಣುವರ್ಧನ ದತ್ತಿ ಬಿಟ್ಟ ಬಗ್ಗೆಯೂ ಶಾಸನಗಳಲ್ಲಿ ಉಲ್ಲೇಖವಿದೆ.  ಶಿಥಿಲವಾಗಿರುವ ಕೈಲಾಸೇಶ್ವರ ದೇವಾಲಯದ ಗೋಡೆಗಳ ಮೇಲೂ ದಿಂಡುಕಲ್ಲುಗಳ ಮೇಲೂ ಹಲವು ತಮಿಳು ಶಾಸನಗಳಿವೆ. 

ಹಿಂದಿನ ಲೇಖನವೋಟರ್ ಐಡಿ ಪರಿಷ್ಕರಣೆ ಅಕ್ರಮ: ಇನ್ನಿಬ್ಬರು ಆರೋಪಿಗಳ ಬಂಧನ
ಮುಂದಿನ ಲೇಖನಮೈಸೂರು: ಆರ್ಥಿಕವಾಗಿ ಹಿಂದುಳಿದವರಿಗೆ ಕುರಿ ವಿತರಣೆ