ಮನೆ ಕಾನೂನು ಆರೋಗ್ಯ ಕವಚ ಆ್ಯಂಬುಲೆನ್ಸ್‌ ಕಾರ್ಯಾಚರಣೆ ಅವಧಿ ಕಡಿತ: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ

ಆರೋಗ್ಯ ಕವಚ ಆ್ಯಂಬುಲೆನ್ಸ್‌ ಕಾರ್ಯಾಚರಣೆ ಅವಧಿ ಕಡಿತ: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ

0

ಆರೋಗ್ಯ ಕವಚ 108 ಆ್ಯಂಬುಲೆನ್ಸ್‌ಗಳ ಕಾರ್ಯಾಚರಣೆಯ ಅವಧಿಯನ್ನು ದಿನಕ್ಕೆ 12 ಗಂಟೆಯ ಬದಲು 8 ಗಂಟೆಗೆ ಇಳಿಕೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಹಾಗೂ 108 ಆ್ಯಂಬುಲೆನ್ಸ್‌ ಸೇವೆ ಒದಗಿಸುವ ಖಾಸಗಿ ಸಂಸ್ಥೆ ಜಿವಿಕೆ-ಇಎಂಆರ್‌ಐಗೆ ಕರ್ನಾಟಕ ಹೈಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದೆ.

Join Our Whatsapp Group

ಆರೋಗ್ಯ ಕವಚ-108 ನೌಕರರ ಪರವಾಗಿ ಅಖಿಲ ಕರ್ನಾಟಕ 108 ಅ್ಯಂಬುಲೆನ್ಸ್‌ ನೌಕರರ ಹಿತರಕ್ಷಣಾ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಕವಚ-108 ಆ್ಯಂಬುಲೆನ್ಸ್‌ ನೌಕರರ ಸಂಘ, ಸುವರ್ಣ ಕರ್ನಾಟಕ ಆರೋಗ್ಯ ಕವಚ -108 ಆ್ಯಂಬುಲೆನ್ಸ್‌ ನೌಕರರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರ ಹಾಗೂ ಜಿವಿಕೆ-ಇಎಂಆರ್‌ಐ ಸಂಸ್ಥೆ ಪರ ವಕೀಲರು ಹಾಜರಾಗಿ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದನ್ನು ಒಪ್ಪಿದ ಪೀಠವು ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿತು.

ಆರೋಗ್ಯ ಕವಚ-108 ಆ್ಯಂಬುಲೆನ್ಸ್‌ ಸೇವೆಯ 2008ರ ಮೂಲ ಒಡಂಬಡಿಕೆ ಪ್ರಕಾರ ದಿನಕ್ಕೆ 2 ಪಾಳಿ ಇತ್ತು. ಆಗ ಒಂದು ಪಾಳಿಯಲ್ಲಿ 12 ಗಂಟೆಯಂತೆ ದಿನಕ್ಕೆ ಎರಡು ಪಾಳಿಯಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಮೂರು ಪಾಳಿ ನಿಗದಿಪಡಿಸಿ ಕಾರ್ಯಾಚರಣೆಯ ದಿನದ ಅವಧಿಯನ್ನು 12 ಗಂಟೆಯಿಂದ 8 ಗಂಟೆಗೆ ಇಳಿಕೆ ಮಾಡಲಾಗಿದೆ. ಮೊದಲ ಪಾಳಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಇದ್ದರೆ, 2ನೇ ಪಾಳಿ ಮಧ್ಯಾಹ್ನ 2ರಿಂದ ರಾತ್ರಿ 10 ಹಾಗೂ ಮೂರನೇ ಪಾಳಿ ರಾತ್ರಿ 10ರಿಂದ ಬೆಳಿಗ್ಗೆ 6ಕ್ಕೆ ನಿಗದಿಪಡಿಸಲಾಗಿದೆ. ಈ ಸಮಯ ಅವೈಜ್ಞಾನಿಕವಾಗಿದೆ. ನಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಸಿಬ್ಬಂದಿ ಗ್ರಾಮೀಣ ಭಾಗದಲ್ಲಿ ವಾಸ ಮಾಡುತ್ತಾರೆ. ಇದರಿಂದಾಗಿ ರಾತ್ರಿ ವೇಳೆ ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್‌ಗಳ ಸೇವೆ ದುರ್ಲಭವಾಗಲಿದೆ. ಅಲ್ಲದೇ 400ಕ್ಕೂ ಅಧಿಕ ಮಹಿಳಾ ಸಿಬ್ಬಂದಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಬದಲಾಗಿರುವ ಪಾಳಿ ಸಮಯ ಅನುಕೂಲಕರವಾಗಿಲ್ಲ. ಅದೇ ರೀತಿ, ಕಾರ್ಯನಿರ್ವಹಣೆಗೆ ವಲಯವಾರು ವರ್ಗೀಕರಣ ಮಾಡಿರುವುದು ಸರಿಯಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಆದ್ದರಿಂದ ಎರಡರ ಬದಲು ಮೂರು ಪಾಳಿ ನಿಗದಿಪಡಿಸಿ ಕಾರ್ಯಾಚರಣೆಯ ಅವಧಿಯನ್ನು 12 ಗಂಟೆಯಿಂದ 8 ಗಂಟೆಗೆ ಇಳಿಕೆ ಮಾಡಿ 2024ರ ಡಿಸೆಂಬರ್ 31ರಂದು ಹೊರಡಿಸಲಾದ ಜ್ಞಾಪನಾ ಪತ್ರ ರದ್ದುಪಡಿಸಬೇಕು. ಅಲ್ಲದೇ ಅರ್ಜಿ ಇತ್ಯರ್ಥ ಆಗುವ ತನಕ ಈ ಜ್ಞಾಪನಾ ಪತ್ರಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.