ವಿಜಯಪುರ : ಜಿಲ್ಲೆಯ ಹೊರವಲಯದಲ್ಲಿ ಹಾಡಹಗಲೇ ಶೂಟೌಟ್ ನಡೆದಿದೆ. ಸಿನಿಮೀಯ ರೀತಿಯಲ್ಲಿ ಅಟ್ಯಾಕ್ ಮಾಡಿ ಹಂತಕರು ಗುಂಡಿನ ಸುರಿಮಳೆಗೈದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ ಕಲ್ಲಿನಿಂದ ಮೃತನ ಮೇಲೆ ಹಲ್ಲೆ ಮಾಡಿದ್ದಾರೆ. ವಿಜಯಪುರ ನಗರದ ಹೊರವಲಯದ ಅಲಿಯಾಬಾದ್ ಬಳಿ ಭೀಕರ ಹತ್ಯೆ ನಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಜೊತೆಗೆ ಕೃಷಿಕನಾಗಿದ್ದ ರಾಜು ಕಡೆ ಎಂಬಾತ ಥಾರ್ ಕಾರ್ ತಗೆದುಕೊಂಡು ವಿಜಯಪುರದತ್ತ ಬರುತ್ತಿರುವಾಗ ಹಂತಕರು ಟಿಪ್ಪರ್ನಿಂದ ಮುಖಾಮುಖಿ ಗುದ್ದಿದ್ದಾರೆ. ನಂತರ ಕಾರಿನ ಡೋರ್ ಓಪನ್ ಆಗದೇ ಇರೋದಕ್ಕೆ ಕಲ್ಲುಗಳನ್ನ ಎತ್ತಿ ಹಾಕಿದ್ದಾರೆ. ಇಷ್ಟಕ್ಕೆ ತೃಪ್ತರಾಗದ ಹಂತಕರು ಕಾರಿನ ಮೇಲೆ ಗುಂಡಿನ ಸುರಿಮಳೆ ನಡೆಸಿದ್ದಾರೆ.
ಈ ಹತ್ಯೆಗೆ ಬಹಳ ದಿನಗಳಿಂದ ಸ್ಕೆಚ್ ಹಾಕಲಾಗಿದ್ದು, ರಾಜು ದಿನನಿತ್ಯದ ಚಲನವಲನಗಳ ಮೇಲೆ ಹಂತಕರು ನಿಗಾ ಇಟ್ಟಿದ್ದರು. ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಜು ಏಕಾಂಗಿಯಾಗಿ ಬರೋದನ್ನ ಅರಿತು ದಾಳಿ ಮಾಡಲಾಗಿದೆ. ಇನ್ನು ಈ ಕೃತ್ಯಕ್ಕೆ ಆಸ್ತಿಯ ವೈಷಮ್ಯವೇ ಕಾರಣ. ಈ ಹಿಂದೆ ಕೂಡ ಆಸ್ತಿಗಾಗಿ ಗಲಾಟೆ ನಡೆದಿತ್ತು. ಹತ್ಯೆಯ ಆರೋಪಿಗಳನ್ನ ಈ ಕೂಡಲೇ ಬಂಧಿಸಬೇಕು ಅಂತಾ ಮೃತ ರಾಜು ಪತ್ನಿ ಇಟಾಬಾಯಿ ಆಗ್ರಹಿಸಿದ್ದಾರೆ.
ರಾಜು ನನ್ನ ನೆನೆದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ವಿಜಯಪುರ ಗ್ರಾಮೀಣ ಹಾಗೂ ಎಪಿಎಂಸಿ ಠಾಣೆಯ ಪೊಲೀಸರು ಸದ್ಯ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಪರಿಶೀಲನೆ ನಡೆಸಿದ್ದಾರೆ. ಹಂತಕರ ಸೆರೆಗೆ ಕೂಡ ಪೊಲೀಸರು ಜಾಲ ಬೀಸಿದ್ದು, ಪೊಲೀಸ್ರ ತನಿಖೆಯಿಂದ ಹತ್ಯೆಯ ಸತ್ಯಾಸತ್ಯತೆ ತಿಳಿಯಲಿದೆ.















