ಮನೆ ಕಾನೂನು ಅಂಜಲಿ ಹತ್ಯೆ ಬೆದರಿಕೆ ‘ಮೂಢನಂಬಿಕೆ’ ಎಂದು ನಿರ್ಲಕ್ಷ್ಯ: ಇಬ್ಬರು ಪೊಲೀಸರು ಸಸ್ಪೆಂಡ್

ಅಂಜಲಿ ಹತ್ಯೆ ಬೆದರಿಕೆ ‘ಮೂಢನಂಬಿಕೆ’ ಎಂದು ನಿರ್ಲಕ್ಷ್ಯ: ಇಬ್ಬರು ಪೊಲೀಸರು ಸಸ್ಪೆಂಡ್

0

ಹುಬ್ಬಳ್ಳಿ: ಬುಧವಾರ ಬೆಳಗ್ಗೆ ನಡೆದ ಯುವತಿ ಅಂಜಲಿ ಹತ್ಯೆ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್​ ಹಾಗೂ ಮಹಿಳಾ ಹೆಡ್​ ಕಾನ್ಸ್‌ ಟೇಬಲ್ ಅಮಾನತುಗೊಳಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್​ ಕಮಿಷನರ್​ ರೇಣುಕಾ ಸುಕುಮಾರ್​ ಆದೇಶಿಸಿದ್ದಾರೆ.

Join Our Whatsapp Group

ಪೊಲೀಸ್ ಇನ್ಸ್ಪೆಕ್ಟರ್ ಸಿ.ಬಿ.ಚಿಕ್ಕೋಡಿ ಹಾಗೂ ಹೆಡ್​ ಕಾನ್ಸ್​ ಟೇಬಲ್ ರೇಖಾ ಹಾವರಡ್ಡಿ ಅಮಾನತಾದ ಸಿಬ್ಬಂದಿ.

ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ವಿಶ್ವನಾಥ ಎಂಬಾತ ಆಕೆಯ ಮನೆಗೆ ನುಗ್ಗಿ ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಕುಟುಂಬಸ್ಥರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, “ಅಂಜಲಿಯನ್ನು ವಿಶ್ವನಾಥ ಪ್ರೀತಿಸುವಂತೆ ಪೀಡಿಸುತ್ತಿದ್ದ. ಆಕೆ ಒಪ್ಪದೇ ಇದ್ದಾಗ ನೇಹಾ ಹಿರೇಮಠಗೆ ಆದ ಹಾಗೆಯೇ ನಿನಗೂ ಆಗಲಿದೆ ಎಂದು ಬೆದರಿಕೆ ಹಾಕಿದ್ದ. ಇದರಿಂದ ಭಯಗೊಂಡಿದ್ದ ನಾವು ಬೆಂಡಿಗೇರಿ ಪೊಲೀಸ್​ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲು ಹೋಗಿದ್ದೆವು. ಆ ಸಂದರ್ಭದಲ್ಲಿ ಪೊಲೀಸರು “ಇವೆಲ್ಲಾ ಮೂಢನಂಬಿಕೆ” ಎಂದು ಹೇಳಿ ಘಟನೆಯನ್ನು ನಿರ್ಲರ್ಕ್ಷಿಸಿದ್ದರು.

ಅಂದೇ ಆರೋಪಿಯ ಮೇಲೆ ಕಠಿಣ ಕ್ರಮ ತೆಗೆದುಕೊಂಡು, ಪ್ರಕರಣ ದಾಖಲಿಸುತ್ತಿದ್ದರೆ ಹತ್ಯೆ ತಪ್ಪಿಸಬಹುದಿತ್ತು” ಎಂದು ಆರೋಪಿಸಿದ್ದಾರೆ.

ಈ ಆರೋಪದ ಹಿನ್ನೆಲೆಯಲ್ಲಿ ಬೆಂಡಿಗೇರಿ ಪೊಲೀಸ್​ ಠಾಣೆಯಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಇನ್ಸ್ಪೆಕ್ಟರ್ ಮತ್ತು ಹೆಡ್​ ಕಾನ್ಸ್​ಟೇಬಲ್ ಕರ್ತವ್ಯ ಲೋಪ ತೋರಿರುವುದು ಕಂಡುಬಂದಿದೆ. ಹೀಗಾಗಿ ಪೊಲೀಸ್​ ಕಮಿಷನರ್​ ಕಠಿಣ ಕ್ರಮ ಕೈಗೊಂಡಿದ್ದಾರೆ.