ಮನೆ ಕಾನೂನು ಅವಧಿ ಮೀರಿದ ನಂತರ ಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಅವಧಿ ಮೀರಿದ ನಂತರ ಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

0

ಅಪರಾಧ ಕೃತ್ಯ ಅಸಂಜ್ಞೆಯ ( ನಾನ್ ಕಾಗ್ನಿಜಬಲ್) ಸ್ವರೂಪದ್ದಾಗಿದ್ದು, ಒಂದರಿಂದ ಮೂರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದ್ದಾರೆ ಮೂರು ವರ್ಷದೊಳಗೆ ವಿಚಾತರಣೆ (ಕಾಗ್ನಿಜೆನ್ಸ್) ಕೈಗೆತ್ತಿಕೊಳ್ಳಬೇಕು. ಅವಧಿ ಮೀರಿ ವಿಚಾರಣಾ ನ್ಯಾಯಾಲಯಗಳು ವಿಚಾರಣೆ ಕೈಗೆತ್ತಿಕೊಳ್ಳುವುದು ಕಾನೂನು ಬಾಹಿರವಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.

Join Our Whatsapp Group

ಮೇಲಾಧಿಕಾರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸುವ ವೇಳೆ ನ್ಯಾಯಾಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ಆರೋಪ ‘ಆಸಂಜ್ಞೇಯ ಅಪರಾಧ ಕೃತ್ಯ’ ಸ್ವರೂಪದ್ದಾಗಿದೆ.2016 ರ ಜೂನ್ 15 ರಂದು ಪ್ರಕರಣ ದಾಖಲಾಗಿದೆ. ಸೂಕ್ತ ಕಾರಣ ನಮೂದಿಸದೆ ಮತ್ತು ವಿವೇಚನೆ ಬಳಸದೆ ತನಿಖೆ ನಡೆಸಲು ಪೊಲೀಸರಿಗೆ ಅನುಮತಿ ನೀಡಿ ಮ್ಯಾಜಿಸ್ಟ್ರೇಟ್ ಕೋರ್ಟ್ 2016ರ ಜೂನ್ 16 ರಂದು ನೀಡಿದ್ದ ಾದೇಶವನ್ನು 2016ರ ಾಗಸ್ಟ್ 9 ರಂದು  ಹೈಕೋರ್ಟ್ ರದ್ದುಪಡಿಸಿದೆ. ಇದಾದ ನಾಲ್ಕು ವರ್ಷಗಳ ನಂತರ ಮ್ಯಾಜಿಸ್ಟ್ರೇಟ್ ಕೋರ್ಟ್ 2020ರ ಆಗಸ್ಟ್ 3 ರಂದು ಮತ್ತೆ ಪೊಲೀಸರ ತನಿಖೆಗೆ ಅನುಮತಿ ನೀಡಿದೆ. ಪೊಲೀಸರು 2020ರ ನವೆಂಬರ್ 12 ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಅದೇ ದಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಕಾಗ್ನಿಜೆನ್ಸ್ ತೆಗೆದುಕೊಂಡು ಅರ್ಜಿದಾರರಿಗೆ ಸಮನ್ಸ್ ಜಾರಿಗೊಳಿಸಿದೆ.

ಆದರೆ ಹೈಕೋರ್ಟ್ 2016ರ ಾಗಸ್ಟ್ 9 ರಂದು ಆದೇಶ ಹೊರಡಿಸಿದ ನಂತರ ಸೂಕ್ತ ಅವಧಿಯಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಪೊಲೀಸರ ತನಿಖೆಗೆ ಅನುಮತಿ ನೀಡಬೇಕಿತ್ತು. ಪೊಲೀಸರು ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಬೇಕಿತ್ತು. ಸಿಆರ್ ಪಿಸಿ ಸೆಕ್ಷನ್ 468 (2) ಪ್ರಕಾರ ಕೃತ್ಯ ಅಸಂಜ್ಞೇಯ ಅಪರಾಧವಾಗಿದ್ದು, ಒಂದು ವರ್ಷದಿಂದ ಮೂರು ವರ್ಷದ ಅವಧಿಗೆ ಜೈಲು ಶಿಕ್ಷೆ ವಿಧಿಸಬಹುದಾಗಿದ್ದರೆ ಅಂತಹ ಸಂದರ್ಭದಲ್ಲಿ ಪ್ರಕರಣ ದಾಖಲಾದ ಮೂರು ವರ್ಷದೊಳಗೆ ವಿಚಾರಣೆಗೆ ತೆಗೆದುಕೊಳ್ಳಬೇಕು. ಮೂರು ವರ್ಷಗಳ ನಂತರ ವಿಚಾರಣೆಗೆ ತೆಗೆದುಕೊಳ್ಳುವುದಕ್ಕೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ನಿರ್ಬಂಧವಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಅಲ್ಲದೇ ಈ ಪ್ರಕರಣದಲ್ಲಿ ದೂರು ದಾಖಲಾಗಿ 14 ವರ್ಷಗಳ ನಂತರ 2020ರ ನವೆಂಬರ್ 12ರಂದು ವಿಚಾರಣೆಗೆ ತೆಗೆದುಕೊಳ್ಳಲಾಗಿದೆ. ಸಿಆರ್ ಪಿಸಿ ಸೆಕ್ಷನ್ 468(2)(ಸಿ) ಇದನ್ನು ನಿರ್ಬಂಧಿಸುತ್ತದೆ ಎಂದಿರುವ ಪೀಠ, ಅರ್ಜಿದಾರರ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್ ತೆಗೆದುಕೊಂಡಿದ್ದ ಕಾಗ್ನಿಜೆನ್ಸ್ ಮತ್ತು ಕೆ.ಆರ್.ಪೇಟೆ ಟೌನ್ ಠಾಣೆ ಪೊಲೀಸರು ದಾಖಲಿಸಿದ್ದ ದೂರನ್ನು ರದ್ದುಪಡಿಸಿದೆ. ಅರ್ಜಿದಾರರ ಪರ ವಕೀಲ ಸಿ.ಎನ್ ರಾಜು ವಾದ ಮಂಡಿಸಿದ್ದರು.

ಸಿಆರ್ ಪಿಸಿ ಸೆಕ್ಷನ್ 468(2) ಏನು ಹೇಳುತ್ತದೆ

ಸೆಕ್ಷನ್ 468(2) (ಎ) ಪ್ರಕಾರ ಅಪರಾಧ ಕೃತ್ಯಕ್ಕೆ ದಂಡ ಮಾತ್ರ ವಿಧಿಸುವಂತಿದ್ದ 6 ತಿಂಗಳಲ್ಲಿ ಕಾಗ್ನಿಜೆನ್ಸ್ (ವಿಚಾರಣೆ) ತೆಗೆದುಕೊಳ್ಳಬೇಕು. 468(2) (ಬಿ)  ಪ್ರಕಾರ ಅಪರಾಧಕ್ಕೆ ಕೃತ್ಯಕ್ಕೆ ಒಂದು ವರ್ಷದವರೆಗೆ ಶಿಕ್ಷೆ ವಿಧಿಸಬಹುದಾಗಿದ್ದರೆ 1 ವರ್ಷದೊಳಗೆ ಕಾಗ್ನಿಜೆನ್ಸ್ ತೆಗೆದುಕೊಳ್ಳಬೇಕು. ಸೆಕ್ಷನ್ 468(2)(ಸಿ) ಪ್ರಕಾರ ಅಪರಾಧ ಕೃತ್ಯಕ್ಕೆ ಒಂದರಿಂದ ಮೂರು ವರ್ಷದವರೆಗೆ ಶಿಕ್ಷೆ ವಿಧಿಸುವಂತಿದ್ದರೆ ಮೂರು ವರ್ಷದೊಳಗೆ ಕಾಗ್ನಿಜೆನ್ಸ್ ತೆಗೆದುಕೊಳ್ಳಬೇಕು.

ಕಾಗ್ನಿಜೆನ್ಸ್ ಎಂದರೇನು

ಅಪರಾಧ ಪ್ರಕರಣದಲ್ಲಿ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ಆರೋಪಿಯು ಕೃತ್ಯ ಎಸಗಿರುವುದಕ್ಕೆ ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳ ಲಭ್ಯವಿದೆ ಎಂದು ತಿಳಿದಾಗ ನ್ಯಾಯಾಧೀಶರು ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸುವುದಕ್ಕೆ ಕಾಗ್ನಿಜೆನ್ಸ್ ತೆಗೆದುಕೊಳ್ಳುವುದು ಎನ್ನಲಾಗುತ್ತದೆ.

ಹಿಂದಿನ ಲೇಖನಗೌರಿ ಹತ್ಯೆ ಪ್ರಕರಣ: ಜಾಮೀನು ಕೋರಿ ವಿಶೇಷ ನ್ಯಾಯಾಲಯದ ಕದತಟ್ಟಿದ 11ನೇ ಆರೋಪಿ ಮೋಹನ್ ನಾಯಕ್
ಮುಂದಿನ ಲೇಖನಹಿರಿಯ ಸಾಹಿತಿ, ಖ್ಯಾತ ವಿಮರ್ಶಕ ಜಿ.ಎಚ್.ನಾಯಕ ವಿಧಿವಶ