ಮನೆ ರಾಜ್ಯ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ: ಸೆ.5ಕ್ಕೆ ಅಂತಿಮ ವಿಚಾರಣೆ ನಡೆಸಲಿರುವ ಹೈಕೋರ್ಟ್‌

ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ: ಸೆ.5ಕ್ಕೆ ಅಂತಿಮ ವಿಚಾರಣೆ ನಡೆಸಲಿರುವ ಹೈಕೋರ್ಟ್‌

0

ಬೆಂಗಳೂರು (Bengaluru): ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಸೆಪ್ಟೆಂಬರ್‌ 5 ರಂದು ಹೈಕೋರ್ಟ್‌ ಅಂತಿಮ ಹಂತದ ವಿಚಾರಣೆ ಮಾಡಲಿದೆ.

ಪ್ರಕರಣದ ತನಿಖೆಗೆ ಎಸ್‌ಐಟಿ ನೇಮಿಸಿದ ಆದೇಶ ಮತ್ತು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ದೂರು ಸಂಬಂಧದ ಎಫ್‌ಐಆರ್‌ ರದ್ದು ಕೋರಿ ಸಂತ್ರಸ್ತೆ ಹಾಗೂ ಆರೋಪಿಗಳಿಬ್ಬರು ಸಲ್ಲಿಸಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಹೈಕೋರ್ಟ್‌ ಸೆ.5ಕ್ಕೆ ನಿಗದಿಪಡಿಸಿದೆ. ಸಂತ್ರಸ್ತೆ ಮತ್ತು ಪ್ರಕರಣದ ಆರೋಪಿಗಳಾದ ಎಸ್‌. ಶ್ರವಣ್‌ಕುಮಾರ್‌ ಮತ್ತು ಬಿ.ಎಂ. ನರೇಶ್‌ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಸುನಿಲ್‌ದತ್‌ ಯಾದವ್‌ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಇದೇ ವೇಳೆ ನ್ಯಾಯಪೀಠ, ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ರಮೇಶ್‌ ಜಾರಕಿಹೊಳಿ ದಾಖಲಿಸಿರುವ ಬ್ಲ್ಯಾಕ್‌ಮೇಲ್‌ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ಹೈಕೋರ್ಟ್‌ ಅನುಮತಿ ಪಡೆಯದೇ ವಿಚಾರಣಾಧೀನ ನ್ಯಾಯಾಲಕ್ಕೆ ವಿಶೇಷ ತನಿಖಾ ದಳವು (ಎಸ್‌ಐಟಿ) ಸಲ್ಲಿಸುವಂತಿಲ್ಲ ಎಂದು ನಿರ್ದೇಶಿಸಿದೆ. ಹಾಗೆಯೇ, ಪ್ರಕರಣದ ಸಂಬಂಧ ಉದ್ಭವಿಸುವ ಕಾನೂನು ವಿಚಾರಗಳ ಕುರಿತು ನ್ಯಾಯಾಲಯಕ್ಕೆ ಸಲಹೆ ಹಾಗೂ ನೆರವು ನೀಡಲು ಹಿರಿಯ ನ್ಯಾಯವಾದಿ ಸಂದೇಶ್‌ ಚೌಟ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಿ ಆದೇಶಿಸಿದೆ.

ಪ್ರಕರಣದ ಸಂಬಂಧ ಎಲ್ಲಾ ಅರ್ಜಿಗಳು ಹಾಗೂ ದಾಖಲೆಗಳನ್ನು ಅಮಿಕಸ್‌ ಕ್ಯೂರಿ ಅವರಿಗೆ ಒದಗಿಸುವಂತೆಯೂ ರಿಜಿಸ್ಟ್ರಾರ್‌ಗೆ ನ್ಯಾಯಪೀಠ ಸೂಚಿಸಿತು. ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದು ಕೋರಿ ಶ್ರವಣ್‌ಕುಮಾರ್‌ ಮತ್ತು ನರೇಶ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಎಸ್‌ಐಟಿ, ಬೆಂಗಳೂರು ಪೊಲೀಸ್‌ ಆಯುಕ್ತರು ಮತ್ತು ಮಾಜಿ ಸಚಿವ ರಮೇಶ್‌ ಜಾರಕಿಹೊಳಿಗೆ ನೋಟಿಸ್‌ ಜಾರಿ ಮಾಡಿತು.

ಕೋರ್ಟ್‌ ಸೂಚನೆ ಮೇರೆಗೆ ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌, ಪ್ರಕರಣ ಸಂಬಂಧ ಈವರೆಗೂ ನಡೆದಿರುವ ಬೆಳವಣಿಗೆಗಳು ಮತ್ತು ಪ್ರಕರಣದಲ್ಲಿ ಅಡಗಿರುವ ಕಾನೂನಾತ್ಮಕ ಪ್ರಶ್ನೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಎಸ್‌ಐಟಿ ನೇಮಕಾತಿ ಸಿಂಧುತ್ವದ ಬಗ್ಗೆ ನಿರ್ಣಯ ಮಾಡುವಂತೆ ಹೈಕೋರ್ಟ್‌ಗೆ ಸುಪ್ರೀಂಕೋರ್ಟ್‌ ಸೂಚಿಸಿದೆ. ಅದರಂತೆ ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಬೇಕಿದೆ. ಸೆ.5ರಂದು ಅರ್ಜಿಗಳ ಕುರಿತು ಅಂತಿಮ ವಿಚಾರಣೆ ಆರಂಭಿಸಲಾಗುವುದು. ಅದಕ್ಕೂ ಮುನ್ನ ಅರ್ಜಿದಾರರು ಹಾಗೂ ಪ್ರತಿವಾದಿಗಳ ಪರ ವಕೀಲರು ಪ್ರಕರಣದ ಬೆಳವಣಿಗೆಗಳ ಕುರಿತು ದಿನಾಂಕ ಸಹಿತವಾದ ಸಂಕ್ಷಿಪ್ತವಾಗಿ ವಿವರ ಹಾಗೂ ಮಂಡಿಸಲಿರುವ ಕಾನೂನಾತ್ಮಕ ಅಂಶಗಳ ಲಿಖಿತ ವಾದದ ವಿವರ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅದನ್ನು ಪಕ್ಷಗಾರರು ಸಹ ಪರಸ್ಪರ ಹಂಚಿಕೊಳ್ಳಬೇಕು ಎಂದು ನಿರ್ದೇಶಿಸಿತು.

ಹಿಂದಿನ ಲೇಖನಇಂದಿನ ಚಿನ್ನ-ಬೆಳ್ಳಿ ದರದ ವಿವರ
ಮುಂದಿನ ಲೇಖನಮಂಗಳೂರು ಪಬ್‌ ನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಪಾರ್ಟಿ: ಬಜರಂಗ ದಳ ಕಾರ್ಯಕರ್ತರಿಂದ ತಡೆ